ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ನೀಡಲಾಗಿರುವ ಮಧ್ಯಂತರ ಜಾಮೀನು ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಶೀಘ್ರ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ವಿಚಾರಣಾ ದಿನಾಂಕ ನಿಗದಿಯಾಗಬೇಕಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಮುಂದೆ ಪ್ರಕರಣವನ್ನು ಆಲಿಸಲು ಕೋರಿ ಲೋಕಾಯುಕ್ತ ಪರ ವಕೀಲರು ಇಂದು ಬೆಳಗ್ಗೆ ಉಲ್ಲೇಖಿಸಿದರು. ಸಾಂವಿಧಾನಿಕ ಪೀಠದ ಭಾಗವಾಗಿದ್ದ ಸಿಜೆಐ ಅವರು ಪ್ರಕರಣವನ್ನು ತಮ್ಮ ನಂತರದ ಹಿರಿತನವಿರುವ ಸಂಜಯ್ ಕಿಶನ್ ಕೌಲ್ ಅವರ ಮುಂದೆ ಉಲ್ಲೇಖಿಸಲು ಕೋರಿದರು.
ಇದರಂತೆ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಅವರ ನೇತೃತ್ವದ, ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ಉಲ್ಲೇಖಿಸಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಪೀಠವು ಶೀಘ್ರ ಪ್ರಕರಣವನ್ನು ಪಟ್ಟಿ ಮಾಡುವ ಭರವಸೆ ನೀಡಿತು. ಆದರೆ, ದಿನಾಂಕವನ್ನು ನಿಗದಿಗೊಳಿಸಲಿಲ್ಲ.
"ಇದರಲ್ಲಿ ತುರ್ತು ಏನಿದೆ? ಇದು ನಿರೀಕ್ಷಣಾ ಜಾಮೀನಿನ ರದ್ದತಿ ಕೋರಿರುವ ಪ್ರಕರಣವಲ್ಲವೇ? ಎಷ್ಟು ಶೀಘ್ರವೋ ಅಷ್ಟು ಬೇಗ ಪಟ್ಟಿ ಮಾಡಿ. ಹೈಕೋರ್ಟ್ ತನ್ನ ವಿವೇಚನೆಯನ್ನು ಬಳಸಿದೆಯಲ್ಲ. ಇಲ್ಲಿ ಜಾಮೀನಿನ ರದ್ದತಿಯನ್ನು ಕೋರಿದ್ದೀರಿ. ಇದರಲ್ಲಿ ತುರ್ತು ಏನಿದೆ?" ಎಂದು ಪೀಠವು ಇಂದೇ ವಿಚಾರಣೆಗೆ ಪಟ್ಟಿ ಮಾಡಲು ಕೋರಿದ್ದ ಲೋಕಾಯುಕ್ತ ಪರ ವಕೀಲರನ್ನು ಪ್ರಶ್ನಿಸಿತು.
ಇದೇ ಮಾರ್ಚ್ 7ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ ನಟರಾಜನ್ ಅವರು ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ಜಾಮೀನು ನೀಡಿ ಆದೇಶಿಸಿದ್ದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್) ಕಚ್ಚಾ ಸಾಮಗ್ರಿ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಬಿಜೆಪಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ಅವರು ನಿರೀಕ್ಷಣಾ ಜಾಮೀನು ಅರ್ಜಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರ ಮಾಡಾಳ್ ವಿರೂಪಾಕ್ಷಪ್ಪ ಅವರು ಐದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಸಲ್ಲಿಸಬೇಕು. ಆದೇಶವಾದ 48 ಗಂಟೆಗಳ ಒಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಬೇಕು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ಪ್ರತಿವಾದಿ ಲೋಕಾಯುಕ್ತ ಪೊಲೀಸರು ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಾಲಯವು ಜಾಮೀನು ವೇಳೆ ಷರತ್ತು ವಿಧಿಸಿತ್ತು. ಪ್ರಕರಣದ ವಿಚಾರಣೆಯನ್ನು ಅದು ಮಾರ್ಚ್ 17ಕ್ಕೆ ಮುಂದೂಡಿದೆ.