Karnataka High Court 
ಸುದ್ದಿಗಳು

ಮೋಟಾರು ವಾಹನ ತಿದ್ದುಪಡಿ ಅಧಿನಿಯಮ: ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಲು ಸಾರಿಗೆ ಇಲಾಖೆಗೆ ನಿರ್ದೇಶಿಸಿದ ಹೈಕೋರ್ಟ್

ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 33ಕ್ಕೆ ತಿದ್ದುಪಡಿ ಮಾಡಿ ಹೊಸ ವಾಹನಗಳಿಗೆ ಡೀಲರ್ ಮಟ್ಟದಲ್ಲೇ ಆನ್‌ಲೈನ್ ಮೂಲಕ ಆರ್ ಸಿ ವಿತರಿಸುವ ಸಂಬಂಧ 2021ರ ಅ.31ರಂದು ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಲಾಗಿದೆ.

Bar & Bench

ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ವಿತರಣೆಗೆ ಕಲರ್ ಜೆರಾಕ್ಸ್ ಬದಲಿಗೆ ಹಿಂದಿನ ವ್ಯವಸ್ಥೆಯಂತೆಯೇ ಸ್ಮಾರ್ಟ್ ಕಾರ್ಡ್ ವಿತರಿಸುವಂತೆ ಸಾರಿಗೆ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 33ಕ್ಕೆ ತಿದ್ದುಪಡಿಯ ಮೂಲಕ ಹೊಸ ವಾಹನಗಳಿಗೆ ಡೀಲರ್ ಮಟ್ಟದಲ್ಲೇ ಎಲೆಕ್ಟ್ರಾನಿಕ್ ಅಥವಾ ಆನ್‌ಲೈನ್ ಮೂಲಕ ಆರ್ ಸಿ ವಿತರಿಸುವ ಸಂಬಂಧ 2021ರ ಅಕ್ಟೋಬರ್‌ 31ರಂದು ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸ್ಮಾರ್ಟ್ ಕಾರ್ಡ್ ಆಧಾರಿತ ಆರ್‌ ಸಿ ವಿತರಣಾ ಸಂಸ್ಥೆಯಾದ ರೊಸ್ಮೆರ್ಟಾ ಟೆಕ್ನಾಲಜೀಸ್ ಲಿಮಿಟೆಡ್ ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಮತ್ತು ಸರ್ಕಾರದ ವಕೀಲರ ವಾದವನ್ನು ಕೆಲ ಆಲಿಸಿದ ಪೀಠವು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಹಾಗೂ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು 2022ರ ಜನವರಿ 31ಕ್ಕೆ ಮುಂದೂಡಿತು.

ವಾಹನಗಳ ನೋಂದಣಿಯನ್ನು ಅಕ್ಟೋಬರ್‌ 31ರ ಅಧಿಸೂಚನೆ ಹೊರಡಿಸುವುದಕ್ಕೂ ಮೊದಲೇ ಇದ್ದ ವ್ಯವಸ್ಥೆಯಂತೆಯೇ ನಡೆಸಬಹುದು ಎಂದು ಪೀಠ ಸ್ಪಷ್ಟಪಡಿಸಿದೆ.

ಸ್ಮಾರ್ಟ್ ಕಾರ್ಡ್ ಆಧಾರಿತ ವಾಹನ ನೋಂದಣಿ ಪ್ರಮಾಣಪತ್ರ ವಿತರಣೆಗೆ ಸಂಬಂಧಿಸಿದಂತೆ ಅರ್ಜಿದಾರ ಸಂಸ್ಥೆಯೊಂದಿಗೆ ಸರ್ಕಾರ 2009ರಲ್ಲಿ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಅವಧಿ 2024ರ ವರೆಗೆ ಚಾಲ್ತಿಯಲ್ಲಿರಲಿದೆ. ಹೀಗಿರುವಾಗ ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 33ಕ್ಕೆ ತಿದ್ದುಪಡಿ ತಂದು, ಸ್ಮಾರ್ಟ್ ಕಾರ್ಡ್ ಆಧಾರಿತ ಆರ್ ಸಿ ಬದಲಿಗೆ ಎಲೆಕ್ಟ್ರಾನಿಕ್ ವಿಧಾನದ ಮೂಲಕ ಆರ್ ಸಿ ವಿತರಣೆಗೆ ಸರ್ಕಾರ ನಿರ್ಧಾರ ಕೈಗೊಂಡಿರುವುದು ಕಾನೂನು ಬಾಹಿರ ಕ್ರಮ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.

ಡೀಲರ್ ಮಟ್ಟದಲ್ಲೇ ವಾಹನ ನೋಂದಣಿಗೆ ಅವಕಾಶ ಕಲ್ಪಿಸುವ ಸಂಬಂಧ ಅಕ್ಟೋಬರ್‌ 26ರಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಕರಡು ಅಧಿಸೂಚನೆ ಹೊರಡಿಸಿದ್ದಾರೆ. ಸಾರ್ವಜನಿಕರ ಸಲಹೆ ಹಾಗೂ ಆಕ್ಷೇಪಣೆ ಸಲ್ಲಿಸಲು ಕೇವಲ ಐದು ದಿನ ಕಾಲಾವಕಾಶ ನೀಡಿ, ನಿಯಮಗಳನ್ನು ಅಂತಿಮಗೊಳಿಸಿ, ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕರ ಆಕ್ಷೇಪಣೆ ಸಲ್ಲಿಕೆಗೆ ಕಡ್ಡಾಯವಾಗಿ ಕನಿಷ್ಠ ಒಂದು ತಿಂಗಳು ಕಾಲಾವಕಾಶ ನೀಡಬೇಕೆಂಬ ನಿಯಮವನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಅಧಿಸೂಚನೆಯನ್ನು ರದ್ದುಪಡಿಸಬಹುದಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಸರ್ಕಾರದ ನಿರ್ಧಾರ ನಿಯಮಬಾಹಿರ, ಕಾನೂನುಬಾಹಿರ ಹಾಗೂ ವಿವೇಚನಾರಹಿತವಾಗಿದ್ದು, ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯಿದೆ-1988 ಹಾಗೂ ಕೇಂದ್ರ ಮೋಟಾರು ವಾಹನ ಅಧಿನಿಯಮ-1989ಕ್ಕೆ ವ್ಯತಿರಿಕ್ತವಾಗಿದೆ. ಮೇಲಾಗಿ, ಸ್ಮಾರ್ಟ್ ಕಾರ್ಡ್ ಆಧಾರಿತ ಆರ್ ಸಿ ಬದಲಿಗೆ ಕೇವಲ ಎಲೆಕ್ಟ್ರಾನಿಕ್ ಆರ್ ಸಿ ವಿತರಿಸುವ ನಿರ್ಧಾರ ಅರ್ಜಿದಾರ ಸಂಸ್ಥೆ ಹಾಗೂ ಸರ್ಕಾರದ ನಡುವಿನ ಒಪ್ಪಂದಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಅಕ್ಟೋಬರ್‌ 31ರಂದು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಸಂಸ್ಥೆಯೊಂದಿಗಿನ ಒಪ್ಪಂದದ ಅವಧಿ ಪೂರ್ಣಗೊಳ್ಳುವವರೆಗೆ (2024ರ ವರೆಗೆ) ಒಪ್ಪಂದ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿದಾರರು, ಅರ್ಜಿ ಇತ್ಯರ್ಥವಾಗುವವರಗೆ ಸರ್ಕಾರದ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.