ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಹಾನಿ ಮಾಡಿದ್ದಕ್ಕಾಗಿ ಜೆಡಿಎಸ್ ಮುಖಂಡ ಬಿ ಬಿ ಪಾಟೀಲ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ದೂರು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಪಾಟೀಲ್ ಅವರ ಪ್ರತಿಕ್ರಿಯೆ ಕೇಳಿದೆ [ಕರ್ನಾಟಕ ರಾಜ್ಯ ಮತ್ತು ಬಿಬಿ ಪಾಟೀಲ್ ಮತ್ತು ಇತರರು] .
ಪಾಟೀಲ್ ಅವರಿಗೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಜುಲೈ 2023ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಬಿ ಬಿ ಪಾಟೀಲ್ ವಿರುದ್ಧದ ದೂರನ್ನು ತಪ್ಪಾಗಿ ಹೈಕೋರ್ಟ್ ರದ್ದುಗೊಳಿಸಿದೆ ಎಂದು ವಿಚಾರಣೆ ವೇಳೆ ವಾದಿಸಲಾಗಿದೆ.
ಚುನಾವಣಾ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಿಂದನೆ ಮತ್ತು ಇವಿಎಂ ಯಂತ್ರಗಳನ್ನು ಹಾನಿ ಮಾಡಿದ ಗುಂಪಿನ ಭಾಗವಾಗಿದ್ದ ಪಾಟೀಲರ ವಿರುದ್ಧ ವೀಡಿಯೊ ಮತ್ತು ಛಾಯಾಚಿತ್ರಗಳ ರೂಪದಲ್ಲಿ ಬಹಳಷ್ಟು ಸಾಕ್ಷ್ಯಗಳನ್ನು ಒದಗಿಸಲಾಗಿತ್ತು ಎಂಬುದನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ದೂರಲಾಗಿದೆ.
ಚುನಾವಣಾಧಿಕಾರಿಗಳ ಮೇಲೆ ದಾಳಿ ಮಾಡಿ, ವಾಹನಗಳನ್ನು ಜಖಂಗೊಳಿಸಿ ಇವಿಎಂ ಸೇರಿದಂತೆ ಚುನಾವಣಾ ಸಾಮಗ್ರಿಗಳನ್ನು ಧ್ವಂಸಗೊಳಿಸಿದ ಗುಂಪಿನಲ್ಲಿ ಆರೋಪಿ ಪಾಟೀಲ್ ಸಕ್ರಿಯ ಪಾತ್ರ ವಹಿಸಿದ್ದರು ಎಂದು ಮನವಿ ತಿಳಿಸಿದೆ.
ಪ್ರತಿವಾದಿಯು ಕಾನೂನುಬಾಹಿರ ಸಭೆಯ ಭಾಗವಾಗಿ ಅದರ ನೇತೃತ್ವ ವಹಿಸಿದ್ದರು. ಜೊತೆಗೆ ಅವರು ಅಪರಾಧ ಎಸಗಿದ್ದರು ಎಂಬುದನ್ನು ಚಾರ್ಜ್ ಶೀಟ್‌ನ ಭಾಗವಾಗಿರುವ ವೀಡಿಯೊ ರೆಕಾರ್ಡಿಂಗ್ ಸೂಚಿಸುತ್ತದೆ ಎಂದು ತಿಳಿಸಲಾಗಿದೆ. ಇದಲ್ಲದೆ, ಆರೋಪಪಟ್ಟಿಯು ಹೈಕೋರ್ಟ್‌ನ ವಿಚಾರಣೆಯ ಭಾಗವಾಗಿ ಇರಲಿಲ್ಲ ಎಂದೂ ವಿವರಿಸಲಾಗಿದೆ.
ಕರ್ನಾಟಕ ಸರ್ಕಾರದ ಪರವಾಗಿ ವಕೀಲ ಡಿ ಎಲ್ ಚಿದಾನಂದ ವಾದ ಮಂಡಿಸಿದರು.