Karnataka HC, Kalburgi Bench
Karnataka HC, Kalburgi Bench 
ಸುದ್ದಿಗಳು

ಮಹಾರಾಷ್ಟ್ರದಂತೆ ಕರ್ನಾಟಕ ವಿದೇಶಿ ವೈದ್ಯಕೀಯ ಪದವಿಯನ್ನು ಪುರಸ್ಕರಿಸಬೇಕಿಲ್ಲ: ಹೈಕೋರ್ಟ್‌

Bar & Bench

ಮಹಾರಾಷ್ಟ್ರದಂತೆ ಕರ್ನಾಟಕವೂ ವಿದೇಶಿ ವೈದ್ಯಕೀಯ ಪದವಿಯನ್ನು ಮಾನ್ಯ ಮಾಡಬೇಕಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಆದೇಶಿಸಿದೆ.

ಚೀನಾದ ವೈದ್ಯಕೀಯ ಪದವಿ ಮಾನ್ಯ ಮಾಡದ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿಂಬರಹವನ್ನು ಪ್ರಶ್ನಿಸಿ ವೈದ್ಯ ಡಾ.ಸತ್ಯಕ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ವಿದೇಶಿ ವಿಶ್ವವಿದ್ಯಾಲಯಗಳು ನೀಡುವ ವೈದ್ಯಕೀಯ ಪದವಿಗಳನ್ನು ಉದ್ಯೋಗಕ್ಕೆ ಮಾನ್ಯ ಮಾಡುವ ಸಂಬಂಧ ಮಹಾರಾಷ್ಟ್ರವು ಅನುಸರಿಸುವ ನೀತಿಯ ಪಾಲನೆ ಕರ್ನಾಟಕಕ್ಕೆ ಕಡ್ಡಾಯವಲ್ಲ” ಎಂಬ ರಾಜ್ಯ ಸರ್ಕಾರದ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.

“ನೆರೆಯ ರಾಜ್ಯ ಬೇರೆಯೇದೆ ಆದ ಮಾನದಂಡ ಪಾಲಿಸುವ ಮೂಲಕ ವಿದೇಶಿ ವಿಶ್ವವಿದ್ಯಾಲಯಗಳ ವೈದ್ಯಕೀಯ ಪದವಿಯನ್ನ ಮಾನ್ಯ ಮಾಡಿದೆ ಎಂಬ ಒಂದೇ ಕಾರಣಕ್ಕೆ ಕರ್ನಾಟಕ ರಾಜ್ಯವು ವಿದೇಶಿ ವಿಶ್ವವಿದ್ಯಾಲಯಗಳ ವೈದ್ಯಕೀಯ ಪದವಿಗಳನ್ನು ಮಾನ್ಯ ಮಾಡದಿರುವುದು ತಪ್ಪು ಎಂದು ಹೇಳಲಾಗದು” ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರು ತಾವೇ ವಿದೇಶಿ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಆ ಮೂಲಕ ಸಕ್ಷಮ ಪ್ರಾಧಿಕಾರ ನಿಗದಿಪಡಿಸಿದ್ದ ಅರ್ಹತೆಯ ಮಾನದಂಡವನ್ನು ಹೊಂದಿಲ್ಲ. ಜೊತೆಗೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಾಗ ಅದಕ್ಕೆ ಹೊಂದುವಂತಹ ಅರ್ಹತೆಗಳನ್ನು ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: 2020ರ ಸೆಪ್ಟೆಂಬರ್‌ 10ರಂದು ಸಕ್ಷಮ ಪ್ರಾಧಿಕಾರ ನಾನಾ ವಿಭಾಗಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿತ್ತು. ಇದರ ಪ್ರಕಾರ ಭಾರತದಲ್ಲಿ ಸ್ಥಾಪನೆಯಾದ ಯಾವುದೇ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪಡೆದಿರಬೇಕು ಎಂಬ ಅರ್ಹತೆ ನಿಗದಿಪಡಿಸಲಾಗಿತ್ತು. ಅರ್ಜಿದಾರರು ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಾಧಿಕಾರವು ವಿದೇಶಿ ವಿಶ್ವವಿದ್ಯಾಲಯದಲ್ಲಿ ವೈದ್ಯ ಪದವಿ ಪಡೆಯಲಾಗಿದೆ ಎಂಬ ಕಾರಣಕ್ಕೆ ಅರ್ಜಿ ತಿರಸ್ಕರಿಸಿದ್ದರು. ಹೀಗಾಗಿ, ಅವರು ಮೊದಲಿಗೆ ತಾನು ಬೀದರ್ ಜಿಲ್ಲೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಹುದ್ದೆಗೆ ತಾನು ಎಲ್ಲ ರೀತಿಯಲ್ಲೂ ಅರ್ಹ. ಮಹಾರಾಷ್ಟ್ರದಲ್ಲಿ ವಿದೇಶಿ ವಿಶ್ವವಿದ್ಯಾಲಯದಲ್ಲಿನ ವೈದ್ಯ ಪದವಿಯನ್ನು ಮಾನ್ಯ ಮಾಡಲಾಗಿದೆ. ಕರ್ನಾಟಕದಲ್ಲೂ ಹಾಗೆಯೇ ಮಾಡಬೇಕು ಎಂದು ಮನವಿ ಮಾಡಿದ್ದರು. ಆ ಮನವಿಯನ್ನು ತಿರಸ್ಕರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿಂಬರಹ ನೀಡಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.