<div class="paragraphs"><p>CJ Ritu Raj Awasthi and Justice Suraj Govindraj, Karnataka HC</p></div>

CJ Ritu Raj Awasthi and Justice Suraj Govindraj, Karnataka HC

 
ಸುದ್ದಿಗಳು

[ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ] 2 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸದಿದ್ದರೆ ದಂಡ: ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ

Bar & Bench

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ’ಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿಗೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸದಿದ್ದರೆ ದಂಡ ವಿಧಿಸುವುದಾಗಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿಗೆ ಸರ್ಕಾರದ ಆಕ್ಷೇಪಣೆಯ ಕರಡು ಸಿದ್ಧವಾಗಿದೆ. ಅದನ್ನು ಅಂತಿಮಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಇದು ಸಾಂವಿಧಾನಿಕ ಕರ್ತವ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಕಳೆದ ಡಿಸೆಂಬರ್ ತಿಂಗಳಿಂದ ಸರ್ಕಾರ ಕಾಲಾವಕಾಶ ಕೋರುತ್ತಾ ಬಂದಿದೆ. ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳು ಆಡಳಿತಾಧಿಕಾರಿಯ ಅಧೀನದಲ್ಲಿ ಕಾರ್ಯರ್ನಿಹಿಸುತ್ತಿವೆ” ಎಂದು ಪೀಠದ ಗಮನಕ್ಕೆ ತಂದರು.

ಪಕ್ಷಕಾರರ ವಾದ ಆಲಿಸಿದ ಪೀಠವು ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಿತು. ಇದು ಕಡೆಯ ಅವಕಾಶ, ಮತ್ತೆ ಸಮಯ ನೀಡಲಾಗುವುದಿಲ್ಲ. ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ವಿಫಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಸರ್ಕಾರದ ಪರ ವಕೀಲರಿಗೆ ಎಚ್ಚರಿಕೆ ನೀಡಿ ವಿಚಾರಣೆಯನ್ನು ಮಾರ್ಚ್‌ 5ಕ್ಕೆ ಮುಂದೂಡಿತು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯಿದೆ-2021 ಅನ್ನು ಅಸಾಂವಿಧಾನಿಕ ಎಂದು ರದ್ದುಪಡಿಸಬೇಕು. ಚುನಾವಣಾ ಆಯೋಗವು ಈಗಾಗಲೇ ಪ್ರಕಟಿಸಿರುವ ಕರಡು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಅಧಿಸೂಚನೆ ಆಧರಿಸಿ ಚುನಾವಣಾ ಪ್ರಕ್ರಿಯೆ ಮುಂದುವರಿಸಬೇಕು. ಅಂತಿಮ ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪಟ್ಟಿ ಪ್ರಕಟಿಸಿ, ಶೀಘ್ರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಈ ಅರ್ಜಿ ಇತ್ಯರ್ಥವಾಗುವರೆಗೆ ತಿದ್ದುಪಡಿ ಕಾಯಿದೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಲಾಗಿದೆ.