ಕರ್ನಾಟಕ ಪೊಲೀಸರು ಲಿವ್-ಇನ್ ಸಂಬಂಧ, ವೈವಾಹಿಕ ಸಂಬಂಧಿತ ಪ್ರಕಣಗಳ ಹಿಂದೆ ಬಿದ್ದಿದ್ದಾರೆಯೇ ವಿನಾ ನೈಜ ಅಪರಾಧಗಳ ತನಿಖೆ ನಡೆಸುತ್ತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶನಿವಾರ ಕಿಡಿಕಾರಿದೆ.
ಕಾಂತಾರ ಸಿನಿಮಾದ ದೈವಪಾತ್ರಕ್ಕೆ ಅಪಮಾನ ಮಾಡಿದ ಸಂಬಂಧದ ಪ್ರಕರಣ ರದ್ದತಿ ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ನಡೆಸುತ್ತಿದ್ದರು.
ವಿಚಾರಣೆಯ ಒಂದು ಹಂತದಲ್ಲಿ “ರಣವೀರ್ ಸಿಂಗ್ ಅವರು ಚಾಮುಂಡಿ ಬೆಟ್ಟಕ್ಕೆ ನೀಡಲು ಭದ್ರತೆಯ ಸಮಸ್ಯೆ ಇದೆ” ಎಂದು ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹೇಳಿದರು.
ಈ ಹಂತದಲ್ಲಿ ದೂರುದಾರರ ಪರ ವಕೀಲ ಸಿಜಿ ಮಲೆಯಾಳ್ ಅವರು “ಕರ್ನಾಟಕ ಪೊಲೀಸರು ಶಕ್ತಿಯುತವಾಗಿದ್ದು, ರಕ್ಷಣೆ ನೀಡುತ್ತಾರೆ” ಎಂದು ಸಮರ್ಥನೆಗೆ ಮುಂದಾದರು.
ಈ ಹಂತದಲ್ಲಿ ಸಿಜಿ ಮಲೆಯಾಳ್ ಅವರನ್ನು ತಡೆದ ಪೀಠವು “ಒಂದು ನಿಮಿಷ, ಕರ್ನಾಟಕ ಪೊಲೀಸರು ಎಷ್ಟು ಬಲಶಾಲಿಗಳು ಎಂದರೆ ಅವರು ಲಿವ್ ಇನ್ ಸಂಬಂಧ, ದಂಪತಿಯ ಹಿಂದೆ ಹೋಗುತ್ತಾರೆ. ನೈಜ ಅಪರಾಧಗಳನ್ನು ಯಾರೂ ತನಿಖೆ ಮಾಡುತ್ತಿಲ್ಲ. ಎಲ್ಲರೂ ಬಿಎನ್‌ಎಸ್ ಸೆಕ್ಷನ್ 69ರ (ಮದುವೆ ನೆಪದಲ್ಲಿ ಲೈಂಗಿಕ ದುರ್ಬಳಕೆ ಸಂಬಂಧಿತ ಅಪರಾಧಗಳು) ಅಡಿ ಅಪರಾಧಗಳನ್ನು ಮಾತ್ರ ತನಿಖೆ ಮಾಡುತ್ತಾರೆ” ಎಂದು ಕಿಡಿಕಾರಿತು.