ಸುದ್ದಿಗಳು

ಜಿಬಿಎ ವಾರ್ಡ್‌ಗಳಿಗೆ ಪರ್ಯಾಯ ಎಸ್‌ಐಆರ್‌ ಅಮಾನತು: ಹೈಕೋರ್ಟ್‌ಗೆ ರಾಜ್ಯ ಚುನಾವಣಾ ಆಯೋಗದ ವಿವರಣೆ

“ಎಸ್‌ಇಸಿ ಮೆಮೊ ಸಲ್ಲಿಸಿದ್ದು, ಸಂಸದರು/ಶಾಸಕರ ಕ್ಷೇತ್ರಗಳಲ್ಲಿ ಎಸ್‌ಐಆರ್‌ ನಡೆಯುತ್ತಿರುವುದರಿಂದ ಜಿಬಿಎಗೆ ಪ್ರತ್ಯೇಕ ಎಸ್‌ಐಆರ್‌ ನಡೆಸುವುದನ್ನು ಅಮಾನತಿನಲ್ಲಿಡಲಾಗಿದೆ ಎಂದು ತಿಳಿಸಿದೆ” ಎಂಬುದನ್ನು ಆದೇಶದಲ್ಲಿ ದಾಖಲಿಸಿದ ಹೈಕೋರ್ಟ್‌.

Bar & Bench

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೆಲ ವಾರ್ಡ್‌ಗಳಿಗೆ ಪರ್ಯಾಯ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಕ್ಷರಣೆ (ಎಸ್‌ಐಆರ್) ನಡೆಸುವುದನ್ನು ಅಮಾನತಿನಲ್ಲಿಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.

ದೇಶದಾದ್ಯಂತ ಕೇಂದ್ರ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಎಸ್ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಬೆಂಗಳೂರಿನ ಕೆಲ ವಾರ್ಡ್‌ಗಳಿಗೆ ಪ್ರತ್ಯೇಕ ಹಾಗೂ ಸಮಾನಾಂತರ ಎಸ್ಐಆರ್ ನಡೆಸಲು ರಾಜ್ಯ ಚುನಾವಣಾ ಆಯೋಗ ಜೂನ್‌ 19ರಂದು ಹೊರಡಿಸಿರುವ ಆದೇಶ ರದ್ದು ಕೋರಿ ಬೆಂಗಳೂರಿನ ವಿವೇಕ್ ಸೇರಿ ಐದು ಮಂದಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Suraj Govindraj

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಭಾರತೀಯ ಚುನಾವಣಾ ಆಯೋಗದಿಂದ ಎಸ್‌ಐಆರ್‌ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಬಿಎಗೆ ಎಸ್‌ಐಆರ್‌ ನಡೆಸುವುದನ್ನು ಅಮಾನತಿನಲ್ಲಿಡಲಾಗಿದೆ. ಈ ಸಂಬಂಧ ಮೆಮೊ ಸಲ್ಲಿಸಲಾಗಿದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಎಸ್‌ಐಆರ್‌ ಮುಗಿದ ಮೇಲೆ ಜಿಬಿಎ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ” ಎಂದರು.

ಈ ಹಂತದಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ವೆಂಟಕೇಶ್‌ ದಳವಾಯಿ ಅವರು “ಜೂನ್‌ 19ರಂದು ಪ್ರತ್ಯೇಕ ಎಸ್‌ಐಆರ್‌ ನಡೆಸುವ ಸಂಬಂಧ ಜಿಬಿಎ ಮಾಡಿರುವ ಆದೇಶವನ್ನು ಮರು ಚಾಲ್ತಿಗೆ ತರುವ ಸ್ವಾತಂತ್ರ್ಯವನ್ನು ರಾಜ್ಯ ಚುನಾವಣಾ ಆಯೋಗ ಕಾಯ್ದಿರಿಸಿಕೊಂಡಿದೆ” ಎಂದರು. ಇದಕ್ಕೆ ಪೀಠವು “ನೀವು ನಿಮ್ಮದನ್ನು ಚಾಲ್ತಿಗೆ ತನ್ನಿ” ಎಂದಿತು.

ಅಂತಿಮವಾಗಿ ಪೀಠವು “ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್‌ ಫಣೀಂಧ್ರ ಅವರು ಮೆಮೊ ಸಲ್ಲಿಸಿದ್ದು, ಸಂಸದರು/ಶಾಸಕರ ಕ್ಷೇತ್ರಗಳಲ್ಲಿ ಎಸ್‌ಐಆರ್‌ ನಡೆಯುತ್ತಿರುವುದರಿಂದ ಜಿಬಿಎಗೆ ಪ್ರತ್ಯೇಕ ಎಸ್‌ಐಆರ್‌ ನಡೆಸುವುದನ್ನು ಅಮಾನತಿನಲ್ಲಿಡಲಾಗಿದೆ ಎಂದು ತಿಳಿಸಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 28ಕ್ಕೆ ಮುಂದೂಡಿತು.

ಕೇಂದ್ರ ಸರ್ಕಾರ ಎಸ್‌ಐಆರ್‌ ನಡೆಸುವುದಾಗಿ‌ 2025ರ ಅಕ್ಟೋಬರ್ 27ರಂದು ಪ್ರಕಟಿಸಿತ್ತು. ಅದರಂತೆ 2026ರ ಜೂನ್‌ 16ರಂದು ರಾಜ್ಯದಲ್ಲಿ ವಿಧಾನಸಭೆ ಕ್ಷೇತ್ರಗಳ‌ ಮತ‌ದಾರರ ಪಟ್ಟಿಯನ್ನು ಜಫ್ತಿ ಮಾಡಿತ್ತು.‌ ಇದಾದ ಮೂರೇ ದಿನಗಳಲ್ಲಿ ಅಂದರೆ ಜೂನ್‌ 19ರಂದು ರಾಜ್ಯ ಚುನಾವಣಾ ಆಯೋಗ ಸಹ ಜಿಬಿಎಯ ಕೆಲವು ವಾರ್ಡ್‌ಗಳ ಮತಪಟ್ಟಿ ಪರಿಷ್ಕರಣೆ ನಡೆಸಲು ಆದೇಶಿಸಿದೆ ಎಂದು ಅರ್ಜಿದಾರರು‌ ಅರ್ಜಿಯಲ್ಲಿ ‌ಆಕ್ಷೇಪಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್‌ 26ರಿಂದ ಈಗಾಗಲೇ ಜಿಬಿಎ ಸೇರಿ ರಾಜ್ಯದಾದ್ಯಂತ ಎಸ್ಐಆರ್ ಮನೆ‌ ಮನೆ ಸರ್ವೇ ಆರಂಭವಾಗಿದೆ‌. ಒಂದೇ ಅವಧಿಯಲ್ಲಿ ಪ್ರತ್ಯೇಕವಾಗಿ ಪರ್ಯಾಯ ಎಸ್‌ಐಆರ್‌ ನಡೆಸುವುದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿವೆ. ‌ಮೇಲಾಗಿ ಇದು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ರಾಜ್ಯ ಚುನಾವಣಾ ಆಯೋಗ ಜೂನ್‌ 19ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.