ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಕಾರ್ಯಚಟುವಟಿಕೆಗಳನ್ನು ಸರಾಗವಾಗಿ ನಡೆಸಲು ಹೈಕೋರ್ಟ್ ಸಮೀಪ ನಿವೇಶನ ಅಥವಾ ಕಟ್ಟಡ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರಿಗೆ ಕೆಎಸ್‌ಬಿಸಿ ಪದಾಧಿಕಾರಿಗಳು ಈಚೆಗೆ ಮನವಿ ಸಲ್ಲಿಸಿದ್ದಾರೆ.
ಕೆಎಸ್‌ಬಿಸಿಯಲ್ಲಿ 20 ಸಮಿತಿಗಳಿದ್ದು, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪರಿಷತ್‌ನ ಸದಸ್ಯರ ಚೇಂಬರ್‌ಗಳನ್ನು ಬಳಕೆ ಮಾಡಿಕೊಂಡು ಮೂರು ಸಮಿತಿಗಳು ಕೆಲಸ ಮಾಡುವ ಸ್ಥಿತಿ ಇದೆ. ರಾಜ್ಯ ಮತ್ತು ಹೊರರಾಜ್ಯಗಳ ವಕೀಲರು ಕೆಎಸ್‌ಬಿಸಿಗೆ ಭೇಟಿ ನೀಡಲಿದ್ದು, ಅವರಿಗೆ ಸೌಲಭ್ಯ ಕಲ್ಪಿಸಲು ಕಷ್ಟವಾಗಿದೆ. 2016ರಿಂದಲೂ ಹೈಕೋರ್ಟ್ ಸಮೀಪ ನಿವೇಶನ ಅಥವಾ ಕಟ್ಟಡ ಹಂಚಿಕೆ ಮಾಡಿಕೊಡಲು ನಿರಂತರವಾಗಿ ಮನವಿ ಮಾಡಲಾಗುತ್ತಿದ್ದು, ಈ ಕೆಲಸ ಕಾರ್ಯಸಾಧ್ಯವಾಗಿಸುವಂತೆ ಕೋರಲಾಗಿದೆ.
ಕೆಎಸ್‌ಬಿಸಿ ಸೃಷ್ಟಿಯಾಗಿ 60 ವರ್ಷಗಳಾಗಿದ್ದರೂ ಸ್ವಂತ ಕಟ್ಟಡವಿಲ್ಲ. ಕೆಎಸ್‌ಬಿಸಿ ಆರಂಭವಾದಾಗ ಸುಮಾರು 800 ಸದಸ್ಯರಿದ್ದರು. ಈಗ 1.10 ಲಕ್ಷ ವಕೀಲ ಸದಸ್ಯರಿದ್ದು, ಪ್ರತಿ ವರ್ಷ ಸರಾಸರಿ 3,000-3,500 ಸಾವಿರ ವಕೀಲರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಸಂದರ್ಭದಲ್ಲಿ ಹೊಸ ವಕೀಲರ ನೋಂದಣಿ ಹೆಚ್ಚಾಗಲಿದ್ದು, ಪ್ರತಿ ತಿಂಗಳು ಸುಮಾರು 500ಕ್ಕೂ ಹೆಚ್ಚು ವಕೀಲರು ನೋಂದಾಯಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಬರುವ ವಕೀಲರು, ಅವರ ಪೋಷಕರು ಮತ್ತು ಹಿತೈಷಿಗಳು ಹಾಗೂ ವಿಐಪಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲು ಸ್ಥಳಾವಕಾಶದ ಅಗತ್ಯ ಖಂಡಿತಾ ಇದೆ ಎಂದು ವಿವರಿಸಲಾಗಿದೆ.
ಇದರ ಜೊತೆಗೆ ರಾಜ್ಯ ವಕೀಲರ ಪರಿಷತ್‌ನ ಕಾನೂನು ಅಕಾಡೆಮಿಯು ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕಾನೂನು ಕಾರ್ಯಾಗಾರಗಳನ್ನೂ ನಡೆಸಲಾಗುತ್ತಿದೆ. ಕೆಎಸ್‌ಬಿಸಿಯು ಅರೆ ನ್ಯಾಯಿಕ ಪ್ರಾಧಿಕಾರವಾಗಿಯೂ ಕೆಲಸ ಮಾಡುತ್ತಿದ್ದು, ಪ್ರತಿ ವರ್ಷ ವಕೀಲರ ಕಾಯಿದೆಯ ಸೆಕ್ಷನ್ 35ರ ಅಡಿ ವಕೀಲರ ವಿರುದ್ಧ 400-500 ದೂರು ದಾಖಲಾಗುತ್ತಿವೆ. ಲೋಪ ಎಸಗಿದ ವಕೀಲರ ವಿರುದ್ಧ ದಾಖಲಾಗುವ ಪ್ರಕರಣಗಳ ವಿಚಾರಣೆ ಅಗತ್ಯ ಸ್ಥಳಾವಕಾಶದ ಅಗತ್ಯವಿದೆ. ಈ ನಡುವೆ, ಭಾರತೀಯ ವಕೀಲರ ಪರಿಷತ್ ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್ (ಸಿಒಪಿ) ನಿಯಮ ಜಾರಿಗೊಳಿಸಿದ್ದು, ಇದರ ಅಡಿ ಪ್ರತಿಯೊಬ್ಬ ವಕೀಲನೂ ಸಿಒಪಿ ಅರ್ಜಿ, ಅಂಕ ಪಟ್ಟಿ ಮತ್ತು ಕಳೆದ ಐದು ವರ್ಷಗಳಲ್ಲಿ ಸಲ್ಲಿಸಿರುವ ಐದು ವಕಾಲತ್ತುಗಳ ದಾಖಲೆ ಸಲ್ಲಿಸಬೇಕು. ಈ ದಾಖಲೆಗಳ ಸಂಗ್ರಹಣೆಯೇ ಹಾಲಿ ಇರುವ ಶೇ.50 ಜಾಗವನ್ನು ನುಂಗಿ ಹಾಕಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.