karwar port and SC 
ಸುದ್ದಿಗಳು

ಕಾರವಾರ ಬಂದರು ಅಭಿವೃದ್ಧಿ: ಯೋಜನೆ ವಿರುದ್ಧ ಸುಪ್ರೀಂನಲ್ಲಿ ಮೀನುಗಾರರ ಸಂಘದ ಮೆಲ್ಮನವಿ; ರಾಜ್ಯಕ್ಕೆ ನೋಟಿಸ್

ಯೋಜನೆಯಿಂದಾಗಿ ಮೀನುಗಾರರ ಆಸ್ತಿ ಮತ್ತು ಜೀವನದ ಹಕ್ಕುಗಳ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ಹೈಕೋರ್ಟ್‌ ಪೂರ್ಣ ನಿರ್ಲಕ್ಷಿಸಿದೆ ಎಂದು ಮನವಿಯಲ್ಲಿ ವಾದಿಸಲಾಗಿದೆ.

Bar & Bench

ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿ ಯೋಜನೆಯನ್ನು ವಿರೋಧಿಸಿ ಸ್ಥಳೀಯ ಮೀನುಗಾರರ ಸಂಘಟನೆಯು ಸಲ್ಲಿಸಿರುವ ಮೇಲ್ಮನವಿ ಅರ್ಜಿ ಸಂಬಂಧ ಸುಪ್ರೀ ಕೋರ್ಟ್‌ ಕರ್ನಾಟಕ ಸರ್ಕಾರಕ್ಕೆ ಸೋಮವಾರ ನೋಟಿಸ್‌ ಜಾರಿ ಮಾಡಿದೆ. ರೂ. 2 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆ ಇದಾಗಿದೆ [ಬೈತಕಲ್‌ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ವರ್ಸಸ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ].

ಬೈತಕಲ್‌ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘವು ಕರ್ನಾಟಕ ಹೈಕೋರ್ಟ್‌ನ ಜುಲೈ 2021ರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ಮೇಲ್ಮನವಿಯನ್ನು ಆಲಿಸಿದ ಸಿಜೆಐ ಎನ್‌ ವಿ ರಮಣ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಹಾಗೂ ಹಿಮಾ ಕೋಹ್ಲಿ ಅವರನ್ನೊಳಗೊಂಡ ಪೀಠವು ನಿರ್ಮಾಣ ಸಂಸ್ಥೆಗೆ ಬಂದರು ಅಭಿವೃದ್ಧಿ ಚಟುವಟಿಕೆಯನ್ನು ನಿಲ್ಲಿಸುವಂತೆ ಮೌಖಿಕವಾಗಿ ಹೇಳಿದೆ. ಅಲ್ಲದೆ, ಪ್ರಕರಣದ ಸಂಬಂಧ ಕರ್ನಾಟಕ ಸರ್ಕಾರ ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಆದರೆ, ಸುಪ್ರೀಂ ಕೋರ್ಟ್‌ನ ವೆಬ್‌ತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿರುವ ಆದೇಶ ಪ್ರತಿಯಲ್ಲಿ ನಿರ್ಮಾಣ ಚಟುವಟಿಕೆಗೆ ತಡೆಯನ್ನು ನೀಡಿರುವ ಕುರಿತಾದ ಯಾವುದೇ ಮಾಹಿತಿ ಲಭ್ಯವಿಲ್ಲ. ನೋಟಿಸ್‌ಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿರುವ ಸಮ್ಮತಿಯು ಕಾನೂನುಬಾಹಿರವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಈ ಹಿಂದೆ ಅಭಿಪ್ರಾಯಪಟ್ಟಿತ್ತು. ಅದರೆ, ಇದೊಂದರ ಹೊರತಾಗಿ ದೂರುದಾರರು ದಾಖಲಿಸಿದ್ದ ಉಳಿದೆಲ್ಲಾ ಆಕ್ಷೇಪಣೆಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ, ಜಲ ಮತ್ತು ವಾಯುಮಾಲಿನ್ಯ ನಿಯಂತ್ರಣ ಕಾಯಿದೆಗಳು ಮತ್ತು ನಿಬಂಧನೆಗಳಿಗೆ ಬದ್ಧವಾಗಿ ಒಂದು ತಿಂಗಳ ಅವಧಿಯಲ್ಲಿ ಸಮ್ಮತಿಯ ಕುರಿತಾಗಿ ಹೊಸತಾಗಿ ನಿರ್ಧರಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪೀಠವು ಸೂಚಿಸಿತ್ತು.