Karnataka HC and KPSC 
ಸುದ್ದಿಗಳು

ಮರಳಿ ಕೆಎಎಸ್‌ ಪೂರ್ವಭಾವಿ ಮರು ಪರೀಕ್ಷೆ ಕೋರಿಕೆ: ಕೆಪಿಎಸ್‌ಸಿಗೆ ಹೈಕೋರ್ಟ್‌ ನೋಟಿಸ್‌, ಧರಣಿಗಿಲ್ಲ ಅನುಮತಿ

ಅರ್ಜಿದಾರರ ಪ್ರಕಾರ ಡಿಸೆಂಬರ್‌ 29ರಂದು ನಡೆದಿದ್ದ ಮರು ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆ ಪತ್ರಿಕೆ 1ರಲ್ಲಿ 32 ಲೋಪ, ಕನ್ನಡ ಪ್ರಶ್ನೆ ಪತ್ರಿಕೆ 2ರಲ್ಲಿ 27 ದೋಷಗಳು ಕಂಡು ಬಂದಿದ್ದು, ಒಟ್ಟಾರೆ 59 ದೋಷಗಳು ಪತ್ತೆಯಾಗಿವೆ.

Bar & Bench

ಕರ್ನಾಟಕ ಆಡಳಿತಾತ್ಮಕ ಸೇವೆ (ಕೆಎಎಸ್‌) ಪೂರ್ವಭಾವಿ ಪರೀಕ್ಷೆ - 2024ರ ಮರು ಪರೀಕ್ಷೆ ನಡೆಸುವವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲು ಅನುಮತಿಸುವಂತೆ ಕೋರಿದ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆಯ ಮಧ್ಯಂತರ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ. ಆದರೆ, ಇದೇ ವೇಳೆ ರಾಜ್ಯ ಸರ್ಕಾರ ಮತ್ತು ರಾಜ್ಯ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ನೋಟಿಸ್‌ ಜಾರಿಗೊಳಿಸಿತು.

ಮರು ಪರೀಕ್ಷೆ ಕೋರಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರು ಮಧ್ಯಂತರ ಮನವಿ ಪರಿಗಣಿಸಬೇಕು ಎಂದು ಕೋರಿದರು. ರಾಜ್ಯ ಸರ್ಕಾರದ ಪರ ವಕೀಲರು ಅರ್ಜಿಯು ಮೊದಲ ಬಾರಿಗೆ ವಿಚಾರಣೆಗೆ ಬರುತ್ತಿರುವುದರಿಂದ ನೋಟಿಸ್‌ ಸ್ವೀಕರಿಸಲಾಗುವುದು ಎಂದರು.

ಆಗ ಪೀಠವು “ಅನಿರ್ದಿಷ್ಟಾವಧಿಗೆ ಧರಣಿ ನಡೆಸಲು ಅನುಮತಿಸುವಂತೆ ಕೋರಿರುವ ಮಧ್ಯಂತರ ಕೋರಿಕೆಯನ್ನು ಮನ್ನಿಸಲಾಗದು. ಅದಕ್ಕೆ ಅನುಮತಿ ಇಲ್ಲ. ಏನಾದರೂ ಮಾಡುವುದಿದ್ದರೆ ಅರ್ಜಿದಾರರು ಕಾನೂನಿನ ವ್ಯಾಪ್ತಿಯಲ್ಲಿ ಮಾಡಬೇಕು” ಎಂದ ನ್ಯಾಯಾಲಯವು ಸರ್ಕಾರ ಮತ್ತು ಕೆಪಿಎಸ್‌ಸಿಗೆ ನೋಟಿಸ್‌ ಜಾರಿಗೊಳಿಸಿ, ಅರ್ಜಿಯ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು.

ಅರ್ಜಿದಾರರ ಪ್ರಕಾರ ಡಿಸೆಂಬರ್‌ 29ರಂದು ನಡೆದಿದ್ದ ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆ ಪತ್ರಿಕೆ 1ರಲ್ಲಿ 32 ಲೋಪ, ಕನ್ನಡ ಪ್ರಶ್ನೆ ಪತ್ರಿಕೆ 2ರಲ್ಲಿ 27 ದೋಷಗಳು ಕಂಡು ಬಂದಿದ್ದು, ಒಟ್ಟಾರೆ 59 ದೋಷಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮರು ಪರೀಕ್ಷೆ ನಡೆಸುವಂತೆ ಜನವರಿ 16ರಂದು ಆಕಾಂಕ್ಷಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.

ಮೊದಲಿಗೆ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯನ್ನು ಕಳೆದ ವರ್ಷದ ಆಗಸ್ಟ್‌ 27ರಂದು ನಡೆಸಲಾಗಿತ್ತು. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲಿಷ್‌ ಅನ್ನು ತಪ್ಪಾಗಿ ಅನುವಾದ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ 29ರಂದು ಮರು ಪರೀಕ್ಷೆ ನಡೆಸಲಾಗಿತ್ತು. ಆಗಲೂ ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲಿ ಲೋಪಗಳಿವೆ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು.