ಸುದ್ದಿಗಳು

ಅವ್ಯವಹಾರ ಪ್ರಕರಣ: ಕಸಾಪಗೆ ಆಡಳಿತಾಧಿಕಾರಿ ನೇಮಕ, ತನಿಖಾಧಿಕಾರಿ ಸೂಚಿಸಿದಂದು ಜೋಶಿ ವಿಚಾರಣೆಗೆ ಹಾಜರಾಗಲಿ ಎಂದ ಸರ್ಕಾರ

ತನಿಖಾಧಿಕಾರಿ ಬಿಟ್ಟು ಎಲ್ಲರಿಗೂ ದಾಖಲೆಗಳನ್ನು ಮಹೇಶ್‌ ಜೋಶಿ ನೀಡಿದ್ದಾರೆ. ಈ ಕಾರಣಕ್ಕಾಗಿ ಸೆಪ್ಟೆಂಬರ್‌ 30ರಂದು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂದು ನ್ಯಾಯಾಲಯ ವಿವರಿಸಿದ ಅಡ್ವೊಕೇಟ್‌ ಜನರಲ್.‌

Bar & Bench

ಕನ್ನಡ ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದ್ದು, 2023-24ನೇ ಸಾಲಿನ ಆರ್ಥಿಕ ವಹಿವಾಟಿನಲ್ಲಿ ಅಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಗೆ ಆಡಳಿತಾಧಿಕಾರಿ ಸಹಾಯ ಮಾಡಲಿದ್ದಾರೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ ಸೋಮವಾರ ತಿಳಿಸಿದೆ.

ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Suraj Govindraj

ವಾದ-ಪ್ರತಿವಾದ ಆಲಿಸಿದ ಪೀಠವು ಕಸಾಪಗೆ ಸೆಪ್ಟೆಂಬರ್‌ 30ರಂದು ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಕೆ ಮಾಡಲು ಮಹೇಶ್‌ ಜೋಶಿಗೆ ನ್ಯಾಯಾಲಯ ಕಾಲಾವಕಾಶ ನೀಡಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ವಾದಾಂಶಗಳನ್ನು ಹಂಚಿಕೊಳ್ಳುವಂತೆ ಎಲ್ಲಾ ಪಕ್ಷಕಾರರಿಗೆ ನಿರ್ದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಅಕ್ಟೋಬರ್‌ 30ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ, ಜೋಶಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್‌ ಪಾಟೀಲ್‌ ಅವರು “ಸೆಪ್ಟೆಂಬರ್‌ 22ರಂದು ತನಿಖೆಗೆ ಹಾಜರಾಗಲು ಜಿಲ್ಲಾ ಸಹಕಾರ ಉಪನಿಬಂಧಕರು ಸೂಚಿಸಿದ್ದರು. ಅಂದು ಸಂಬಂಧಿಯೊಬ್ಬರು ನಿಧನರಾಗಿದ್ದರಿಂದ ಜೋಶಿ ಅವರು ಕಾಲಾವಕಾಶ ಕೇಳಿದ್ದರು. ಈ ನಡುವೆ, ಸರ್ಕಾರವು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಸೆಪ್ಟೆಂಬರ್‌ 30ರಂದು ಆಡಳಿತಾಧಿಕಾರಿ ನೇಮಕ ಮಾಡಿದೆ. ತನಿಖೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲು ಜೋಶಿ ಸಿದ್ಧರಿದ್ದಾರೆ. ಸೆಪ್ಟೆಂಬರ್‌ 22ರಂದು ತನಿಖೆಗೆ ಹಾಜರಾಗಿಲ್ಲ ಎಂದು ಆಡಳಿತಾಧಿಕಾರಿ ನೇಮಕ ಮಾಡಿದ್ದಾರೆ. ಇದನ್ನು ಅರ್ಜಿಯಲ್ಲಿ ಪ್ರಶ್ನಿಸಿ ತಿದ್ದುಪಡಿ ಮಾಡಲಾಗುವುದು” ಎಂದರು.

ಅದಕ್ಕೆ ಪೀಠವು “ಇದು ಮಾಡುವವರೆಗೆ ನೀವು ಯಾವುದೇ ಸಭೆ ನಡೆಸಲಾಗದು. ಈಗಾಗಲೇ ಸರ್ಕಾರವು ಆಡಳಿತಾಧಿಕಾರಿ ನೇಮಕ ಮಾಡಿರುವುದರಿಂದ ಅವರು ಕಸಾಪ ನಡೆಸುತ್ತಾರೆ” ಎಂದರು. ಅಲ್ಲದೇ, “ತನಿಖಾಧಿಕಾರಿಯ ಮುಂದೆ ಯಾವಾಗ ಹಾಜರಾಗುತ್ತೀರಿ” ಎಂಬ ಪೀಠದ ಪ್ರಶ್ನೆಗೆ ಪಾಟೀಲ್‌ ಅವರು “ನ್ಯಾಯಾಲಯವು ನಿರ್ದೇಶಿಸುವ ಯಾವುದೇ ದಿನ ಜೋಶಿ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಲಿದ್ದಾರೆ” ಎಂದರು.

ಇದಕ್ಕೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಈಗ ಆಡಳಿತಾಧಿಕಾರಿ ನೇಮಕ ಮಾಡಿದ್ದು, ಅವರು ಕಸಾಪ ಆಡಳಿತವನ್ನು ಕೈಗೆ ತೆಗೆದುಕೊಳ್ಳಲಿದ್ದಾರೆ. ಜೋಶಿ ನಡೆಸಿರುವ ಅಕ್ರಮದ ಬಗ್ಗೆ ಉಪನಿಬಂಧಕರಿಂದ ತನಿಖೆ ನಡೆಸಲಾಗುತ್ತದೆ. ಜೋಶಿ ಎಂದು ತನಿಖೆಗೆ ಹಾಜರಾಗಬೇಕು ಎಂಬುದಕ್ಕೆ ಹೊಸ ದಿನಾಂಕವನ್ನು ತನಿಖಾಧಿಕಾರಿ ನೀಡಲಿದ್ದಾರೆ. ತನಿಖಾಧಿಕಾರಿ ಬಿಟ್ಟು ಎಲ್ಲರಿಗೂ ದಾಖಲೆಗಳನ್ನು ಜೋಶಿ ನೀಡಿದ್ದಾರೆ. ಈ ಕಾರಣಕ್ಕಾಗಿ ಆಡಳಿತಾಧಿಕಾರಿ ನೇಮಕ ಮಾಡಬೇಕಾಗಿ ಬಂದಿತ್ತು. ಸಂಬಂಧಿಯೊಬ್ಬರು ಸಾವನ್ನಪ್ಪಿರುವುದರಿಂದ ತನಿಖೆಗೆ ಹಾಜರಾಗಲು 15 ದಿನ ಕಾಲಾವಕಾಶ ನೀಡಬೇಕು ಎಂದು ಜೋಶಿ ಪತ್ರ ಬರೆದಿದ್ದಾರೆ. ಇದು ಅವರ ನಡತೆಯನ್ನು ತೋರಿಸುತ್ತದೆ” ಎಂದರು.

ಆಗ ಪೀಠವು “ನೀವು ತನಿಖೆ ನಡೆಸುತ್ತೀರೋ ಅಥವಾ ಆಡಳಿತಾಧಿಕಾರಿಯು ಕಸಾಪದ ಲೆಕ್ಕ ಪತ್ರಗಳನ್ನು ತೆಗೆದುಕೊಳ್ಳುತ್ತಾರೋ?” ಎಂದಿತು. ಅದಕ್ಕೆ ಎಜಿ ಅವರು “ಆಡಳಿತಾಧಿಕಾರಿಯು ತನಿಖೆಗೆ ಸಹಾಯ ಮಾಡಲಿದ್ದಾರೆ. ಜೋಶಿ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕಾಗುತ್ತದೆ” ಎಂದರು.

ಇದನ್ನು ಆಲಿಸಿದ ಪೀಠವು ಎಲ್ಲರಿಗೂ ವಾದಾಂಶಗಳನ್ನು ಹಂಚಿಕೊಳ್ಳುವಂತೆ ಸೂಚಿಸಿ, ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.

ಹಿರಿಯ ಸಾಹಿತಿ ವಸುಂಧರ ಭೂಪತಿ ಮತ್ತಿತರರು ಕಸಾಪ ಸದಸ್ಯತ್ವ ರದ್ದತಿ ಪ್ರಶ್ನಿಸಿರುವ ಅರ್ಜಿಯ ಸಂಬಂಧ ಸರ್ಕಾರ ಮತ್ತು ಕಸಾಪಗೆ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿದ್ದು, ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆಗೆ ನಿಗದಿಪಡಿಸಿದೆ.