Kannada Sahitya Parishattu Wikipedia
ಸುದ್ದಿಗಳು

ಕಸಾಪ ವಿಶೇಷ ಸಭೆಯ ನಿರ್ಣಯಗಳು ಮೂಲ ದಾವೆಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ: ಬೆಂಗಳೂರು ನ್ಯಾಯಾಲಯ

ಶನಿವಾರ ತುರ್ತು ವಿಚಾರಣೆ ನಡೆಸಿದ ರಜೆಕಾಲದ ಸೆಷನ್ಸ್ ನ್ಯಾಯಾಧೀಶೆ ಶೈಲಾ ಈ ಆದೇಶ ಹೊರಡಿಸಿದರು.

Bar & Bench

ಮೇ ೧ರಂದು ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ ಸರ್ವ ಸದಸ್ಯರ ಸಭೆ ಮತ್ತು ಮಹಾಸಭೆಯಲ್ಲಿ ಕೈಗೊಳ್ಳಲಾಗುವ ಯಾವುದೇ ನಿರ್ಣಯ ನ್ಯಾಯಾಲಯದಲ್ಲಿ ದಾಖಲಾದ ಮೂಲ ದಾವೆಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ನ ಎರಡನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಆದೇಶ ನೀಡಿದೆ.

ಸಭೆ ನಡೆಸುವ ಕುರಿತು 2022ರ ಮಾರ್ಚ್‌ 25ರಂದು ಹೊರಡಿಸಲಾದ ತಿಳಿವಳಿಕೆ ಪತ್ರಕ್ಕೆ ತಡೆ ನೀಡಬೇಕು ಎಂದು ಕಾಮಾಕ್ಷಿಪಾಳ್ಯದ ಎನ್‌ ಹನುಮೇಗೌಡ ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಶನಿವಾರ ತುರ್ತು ವಿಚಾರಣೆ ನಡೆಸಿದ ರಜೆಕಾಲೀನ ಸೆಷನ್ಸ್‌ ನ್ಯಾಯಾಧೀಶೆ ಶೈಲಾ ಈ ಆದೇಶ ಹೊರಡಿಸಿದರು.

ಅರ್ಜಿದಾರರ ವಾದ:

  • ಕಸಾಪ ಅಧ್ಯಕ್ಷರು ಪರಿಷತ್ತಿನ ನಿಯಮಗಳಿಗೆ ವ್ಯತಿರಿಕ್ತವಾಗಿ ಸಭೆ ಕರೆದಿದ್ದಾರೆ.

  • ಈ ಸಭೆಗೆ ಕಾರ್ಯಕಾರಿ ಸಮಿತಿಯ ಅನುಮೋದನೆ ಇಲ್ಲ.

  • ವಿಶೇಷ ಸಭೆಯ ಕಾರ್ಯಸೂಚಿಯನ್ನು ಸರ್ವ ಸದಸ್ಯರ ಸಭೆಯಲ್ಲೇ ಮಂಡಿಸುವ ಅವಕಾಶವಿದೆ. ಆದರೂ ವಿನಾಕಾರಣ ವಿಶೇಷ ಸಭೆ ನಡೆಸುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.

  • ಅಷ್ಟೇ ಅಲ್ಲದೆ ಇದು ಕಾನೂನು ಬಾಹಿರ.

  • ಹೀಗಾಗಿ ತಿಳಿವಳಿಕೆ ಪತ್ರವನ್ನು ಅಸಿಂಧುಗೊಳಿಸಬೇಕು.

ಪ್ರತಿವಾದಿ ಕಸಾಪ ಅಧ್ಯಕ್ಷರ ಬದಲಿಗೆ ಕಾರ್ಯದರ್ಶಿ ಪರ ವಕೀಲರು ವಕಾಲತ್ತು ಸಲ್ಲಿಸಿದ್ದಕ್ಕೆ ಅರ್ಜಿದಾರರ ಪರ ವಕೀಲ ರಮೇಶ್‌ ಬಾಬು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸೂಕ್ತ ರೀತಿಯಲ್ಲಿ ಪ್ರತಿವಾದಿಯನ್ನು ಪ್ರತಿನಿಧಿಸುವಂತೆ ಅವರ ಪರ ವಕೀಲರಿಗೆ ನ್ಯಾಯಾಧೀಶರು ಸೂಚಿಸಿದರು.