ಸುದ್ದಿಗಳು

ಕಾಶ್ಮೀರವು ಯಾವಾಗಲೂ ಭಾರತದ ಭಾಗವಾಗಿತ್ತು: ಸುಪ್ರೀಂ ಕೋರ್ಟ್‌

Bar & Bench

“ಕಾಶ್ಮೀರವು ಯಾವಾಗಲೂ ಭಾರತದ ಭಾಗವಾಗಿತ್ತು” ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಅವರು ಹಿರಿಯ ವಕೀಲ ರವಿ ಶಂಕರ್‌ ಜಂಧ್ಯಾಲ ಅವರಿಗೆ ಶುಕ್ರವಾರ ತಿಳಿ ಹೇಳಿದರು.

ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನ ಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಪುನರ್‌ ವಿಂಗಡಣೆ ಕುರಿತ ಅಧಿಸೂಚನೆ ಪ್ರಶ್ನಿಸಿರುವ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾ. ಕೌಲ್‌ ಅವರು ಮೇಲಿನಂತೆ ಹೇಳಿದರು.

ಅರ್ಜಿದಾರರ ಪರ ಹಿರಿಯ ವಕೀಲ ರವಿ ಶಂಕರ್‌ ಜಂಧ್ಯಾಲ ಅವರನ್ನು ಉದ್ದೇಶಿಸಿ ಪೀಠವು ಅರ್ಜಿದಾರರು ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದನ್ನು ಪ್ರಶ್ನಿಸಿದ್ದಾರೆಯೇ ಇಲ್ಲವೇ ಎಂದು ಪ್ರಶ್ನಿಸಿತು.

ಆಗ ಜಂಧ್ಯಾಲ ಅವರು “ಇಲ್ಲ. 2020ರ ಆಗಸ್ಟ್‌ 5ರ ಬಳಿಕ ಕಾಶ್ಮೀರವು ಭಾರತದ ಭಾಗವಾಯಿತು” ಎಂದು ಪ್ರತಿಕ್ರಿಯಿಸಿದರು.

ಇದಕ್ಕೆ ನ್ಯಾ. ಕೌಲ್‌ ಅವರು “ಇಲ್ಲ. ಪದಗಳನ್ನು ಸರಿಯಾಗಿ ಬಳಕೆ ಮಾಡಿ. ಅದು ಯಾವಾಗಲೂ ಭಾರತದ ಭಾಗವಾಗಿತ್ತು. ವಿಶೇಷ ಸ್ಥಾನಮಾನವನ್ನು ಮಾತ್ರ ರದ್ದು ಮಾಡಲಾಗಿದೆ” ಎಂದರು.

ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಕುರಿತು ಮನವಿಯಲ್ಲಿ ಉಲ್ಲೇಖಿಸಿರುವ ವಿಚಾರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪೀಠವು ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿನ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು 107 ರಿಂದ 114ಕ್ಕೆ ಏರಿಕೆ ಮಾಡಿರುವುದು ಸಂವಿಧಾನದ 81, 82, 170, 330 ಮತ್ತು 332ನೇ ವಿಧಿ ಹಾಗೂ ಜಮ್ಮು ಮತ್ತು ಕಾಶ್ಮೀರ ಪುನರ್‌ ವಿಂಗಡಣಾ ಕಾಯಿದೆ 2019ರ ಸೆಕ್ಷನ್‌ 63ಕ್ಕೆ ವಿರುದ್ಧವಾಗಿದೆ ಎಂದು ಶ್ರೀನಗರದ ನಿವಾಸಿಗಳಾದ ಹಾಜಿ ಅಬ್ದುಲ್‌ ಘನಿ ಖಾನ್‌ ಮತ್ತು ಡಾ. ಮೊಹಮ್ಮದ್‌ ಆಯೂಬ್‌ ಮಟ್ಟೂ ಅವರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಎಂ ಎಂ ಸುಂದರೇಶ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.