ಶ್ರೀನಗರದಲ್ಲಿ ಭಾನುವಾರ ನಡೆದ ತಿರಂಗಾ ಮೆರವಣಿಗೆಯಲ್ಲಿ ಭಾಗವಹಿಸಿದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರು ಕಾಶ್ಮೀರದ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಸಾಲಿನ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಶ್ರೀನಗರದಲ್ಲಿ ಜಮ್ಮು ಮತ್ತು ಕಾಶ್ಮೀರ ಕಾನೂನು ಸೇವೆಗಳ ಪ್ರಾಧಿಕಾರ (ಜೆಕೆಎಲ್‌ಎಸ್‌ಎ)ಹಾಗೂ ಶ್ರೀನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ತಿರಂಗಾ ಸಮಾವೇಶದ ಭಾಗವಾಗಿ ಕಾಶ್ಮೀರದ ಲಾಲ್ ಚೌಕ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಕೋಟೀಶ್ವರ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ಆಂಗ್ಲ ಮಾಧ್ಯಮವೊಂದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸಿಂಗ್, ತಿರಂಗಾ ಮೆರವಣಿಗೆಗಳು ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬುದರ ದ್ಯೋತಕ ಎಂದು ಶ್ಲಾಘಿಸಿದ್ದಾರೆ.
"ಕಳೆದ ಕೆಲ ವರ್ಷಗಳಲ್ಲಿ, ನಾವು ಕಾಶ್ಮೀರ ಅಭಿವೃದ್ಧಿ ಹೊಂದುತ್ತಿರುವುದನ್ನು ಶಾಂತಿ ಮತ್ತು ಚಟುವಟಿಕೆಗಳ ವಿಚಾರದಲ್ಲಿ ಮುಂದುವರಿಯುತ್ತಿರುವುದನ್ನು ನೋಡುತ್ತಿದ್ದೇವೆ " ಎಂದು ಅವರು ಹೇಳಿದ್ದಾರೆ.
"ಜಮ್ಮು ಕಾಶ್ಮೀರದಲ್ಲಿ ಚಾಲ್ತಿಯಲ್ಲಿರುವ ಶಾಂತಿ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಈ ರೀತಿಯ ಚಟುವಟಿಕೆಗಳು ನಡೆಯುತ್ತಿರುವುದರಿಂದ, ಈ ಪ್ರದೇಶಕ್ಕೆ ಹೆಚ್ಚು ಉತ್ತಮ ಭವಿಷ್ಯ ಸೃಷ್ಟಿಯಾಗುತ್ತದೆ ಎಂದು ನನಗೆ ಖಾತ್ರಿಯಿದೆ ... ಈ ದೇಶದ ಭಾಗವಾಗಿ, ಜನರು ರಾಷ್ಟ್ರದ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಜನ ಭಾಗವಹಿಸುತ್ತಿರುವುದು, ಖುದ್ದು ಜನರ ಆಶಯವನ್ನು ತೋರುತ್ತದೆ, ಇದು ಮುಖ್ಯ” ಎಂದು ಅವರು ತಿಳಿಸಿದರು.
ಪ್ರವಾಸೋದ್ಯಮ ಎಂಬುದು ಜಮ್ಮು ಕಾಶ್ಮೀರದ ಆಧಾರವಾಗಿದ್ದು ಪ್ರವಾಸಿಗರು ಯಾವುದೇ ಹಿಂಜರಿಕೆಯಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ಬರುತ್ತಿದ್ದಾರೆ. ಜೊತೆಗೆ ಸಂಪೂರ್ಣ ತೃಪ್ತಿಯಿಂದ ಹಿಂತಿರುಗುತ್ತಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಸಿಂಗ್ ಅಭಿಪ್ರಾಯಪಟ್ಟರು.
“ಯಾತ್ರಿಕರ ಸಂಖ್ಯೆ ಕೂಡ ಕಳೆದ ದಶಕದಲ್ಲಿ ಅತ್ಯಧಿಕವಾಗಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಜನ ಇಲ್ಲಿಗೆ ಬಂದು ನೋಡಲು ಬಯಸುತ್ತಾರೆ ಎಂಬುದನ್ನು ತೋರಿಸುತ್ತದೆ. ಕಾಶ್ಮೀರವನ್ನು ಅದರ ಸಂದಿಗ್ಧಮಯ ಕಾಲಘಟ್ಟದಿಂದಲೇ ನಾವು ನೋಡಲಾಗದು. ಈ ಬೆಳವಣಿಗೆಯೊಂದಿಗೆ ಹೆಜ್ಜೆ ಇರಿಸಬೇಕು. ರಾಜ್ಯದಲ್ಲಿ ಇನ್ನಷ್ಟು ಸ್ಥಿರತೆ, ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಅವರು ವಿವರಿಸಿದರು.
ವಿವಿಧ ನ್ಯಾಯಮೂರ್ತಿಗಳು ಹಾಗೂ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಶಹಜಾದ್ ಅಜೀಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀನಗರದ ಹೈಕೋರ್ಟ್ ಪೀಠದಲ್ಲಿ ನ್ಯಾ. ಸಿಂಗ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಲಾಲ್ ಚೌಕ್‌ನಲ್ಲಿ ಅದು ಪರಿಸಮಾಪ್ತಿಗೊಂಡಿತು.