High Court of Karnataka 
ಸುದ್ದಿಗಳು

ಕಾವೇರಿ 2.0 ಪೋರ್ಟಲ್‌ ತಿರುಚಿ ದಾಖಲೆಗಳ ನೋಂದಣಿ ಪ್ರಕ್ರಿಯೆಯಲ್ಲಿ ವಂಚನೆ: ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಏಕೀಕೃತ ಭೂ ಸ್ವಾಧೀನ ವ್ಯವಸ್ಥೆ ಮುಖಾಂತರ ಆಸ್ತಿಯ ವಿವರ ಪಡೆದು ನಂತರ ಆ ಮಾಹಿತಿ ಸಾಫ್ಟ್‌ವೇರ್‌ ಹ್ಯಾಕ್‌ ಮಾಡಿ ಅಂತಹ ಆಸ್ತಿಗಳನ್ನು ಆರ್‌ಡಿಪಿಆರ್‌ ಆಸ್ತಿ ಎಂದು ಒಟ್ಟು 1,332 ವಹಿವಾಟುಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

Bar & Bench

ಕಾವೇರಿ–2 ಪೋರ್ಟಲ್‌ ವಹಿವಾಟಿನ ಸ್ವರೂಪವನ್ನು ಬದಲಾಯಿಸಿ, ಸ್ಥಿರಾಸ್ತಿಗಳ ದಾಖಲೆ ನೋಂದಣಿ ಪ್ರಕ್ರಿಯೆ ಸಮಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ (ಆರ್‌ಡಿಪಿಆರ್‌) ಇ–ಖಾತಾ ವ್ಯವಸ್ಥೆಯನ್ನು ತಿದ್ದುಪಡಿ ಮಾಡಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಅರ್ಜಿದಾರರು ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂಪಡೆದಿದ್ದಾರೆ.

ವಿಚಾರಣಾಧೀನ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಕೋರಿ ಬೊಮ್ಮನಹಳ್ಳಿಯ ಹರೀಶ್‌ಬಾಬು, ಚಂದ್ರಬಾಬು ಮತ್ತು ಸಿಂಗಸಂದ್ರದ ಸಾಜಿಮೊನ್‌ ಜಾನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ಎಫ್‌ಐಆರ್‌ನಲ್ಲಿ ಅರ್ಜಿದಾರರ ಹೆಸರಿಲ್ಲ. ಆದರೂ ಪೊಲೀಸರು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇವರೆಲ್ಲಾ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ಹೊಂದಿದವರು. ದೂರಿನ ಅನುಬಂಧದಲ್ಲಿ ವಿವರಿಸಲಾದ ಆಸ್ತಿಗಳ ಮಾಲೀಕರು ಅರ್ಜಿದಾರರಿಗೆ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ಮುದ್ರಾಂಕ ಶುಲ್ಕವನ್ನೂ ಪಾವತಿ ಮಾಡಿದ್ದಾರೆ. ಇವರು ಯಾವುದೇ ಅಪರಾಧ ಎಸಗಿಲ್ಲ” ಎಂದು ಪ್ರತಿಪಾದಿಸಿದ್ದರು.

ಒಂದು ಹಂತದಲ್ಲಿ ಪೀಠವು ಅರ್ಜಿದಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವ ಸುಳಿವು ದೊರೆಯುತ್ತಿದ್ದಂತೆಯೇ, ಅವರ ಪರ ವಕೀಲರು ಅರ್ಜಿಯನ್ನು ವಾಪಸು ಪಡೆಯಲು ಪೀಠದ ಅನುಮತಿ ಕೋರಿದರು. ಇದನ್ನು ಮನ್ನಿಸಿದ ನ್ಯಾಯಾಲಯವು ಅರ್ಜಿದಾರರ ಕಾನೂನಾತ್ಮಕ ಸ್ವಾತಂತ್ರ್ಯವನ್ನು ಕಾಯ್ದಿರಿಸಿ ಅರ್ಜಿ ವಿಲೇವಾರಿ ಮಾಡಿ ಆದೇಶಿಸಿತು. ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್ ಬಿ.ಪುಷ್ಪಲತಾ ಹಾಜರಾಗಿದ್ದರು.

ಪ್ರಕರಣದ ಹಿನ್ನೆಲೆ: ಆರೋಪಿಗಳು ಕಾವೇರಿ–2 ಪೋರ್ಟಲ್‌ನಲ್ಲಿ 2024ರ ಡಿಸೆಂಬರ್ 6ರಿಂದ 2025ರ ಡಿಸೆಂಬರ್ 5ರ ಅವಧಿಯಲ್ಲಿ, ಏಕೀಕೃತ ಭೂ ಸ್ವಾಧೀನ ವ್ಯವಸ್ಥೆ (ಯುಎಲ್‌ಎಂಎಸ್‌) ಮುಖಾಂತರ ಆಸ್ತಿಯ ವಿವರಗಳನ್ನು ಪಡೆದುಕೊಂಡು ನಂತರ ಆ ಮಾಹಿತಿ ಸಾಫ್ಟ್‌ವೇರ್‌ ಹ್ಯಾಕ್‌ ಮಾಡಿ (ಸಾಫ್ಟ್‌ವೇರ್‌ ಬೈಪಾಸ್‌ ಮಾಡಿ) ಅಂತಹ ಆಸ್ತಿಗಳನ್ನು ಆರ್‌ಡಿಪಿಆರ್‌ ಆಸ್ತಿ ಎಂದು ಒಟ್ಟು 1,332 ವಹಿವಾಟುಗಳನ್ನು ತಿದ್ದುಪಡಿ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ದಾಖಲೆ ನೋಂದಣಿ ಪ್ರಕ್ರಿಯೆಯಲ್ಲಿ ವಂಚನೆ ಹಾಗೂ ದುರುದ್ದೇಶದ ವಹಿವಾಟುಗಳನ್ನು ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಡಳಿತದ ರೀತಿಯನ್ನು ಕ್ರಾಂತಿಕಾರಿಗೊಳಿಸುವ ನಿಟ್ಟಿನಲ್ಲಿ ತಂತ್ರಾಂಶ ಮತ್ತು ತಂತ್ರಜ್ಞಾನವು ನಮ್ಮ ಆಯ್ಕೆಯ ಅಸ್ತ್ರಗಳಾಗಿವೆ ಎಂಬ ಘೋಷ ವಾಕ್ಯ ಹೊತ್ತ ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ ಕಾರ್ಯನಿರ್ವಾಹಕ ನಿರ್ದೇಶಕರೂ ಆದ ಐಎಎಸ್‌ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಬೆಂಗಳೂರು ಉತ್ತರ ಸೆನ್‌ (ಸೈಬರ್, ಎಕನಾಮಿಕ್‌ ಅಂಡ್‌ ನಾರ್ಕೊಟಿಕ್‌ ಕ್ರೈಂ) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರನ್ನು ರದ್ದುಗೊಳಿಸುವಂತೆ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.