Karnataka HC and Karnataka Examinations Authority
Karnataka HC and Karnataka Examinations Authority 
ಸುದ್ದಿಗಳು

ಮುಂದಿನ ವಿಚಾರಣೆವರೆಗೆ ಕೆಇಎ ವಾಸ್ತವಿಕ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವುದಿಲ್ಲ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

Bar & Bench

“ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದ ನೈಜ ಕೌನ್ಸೆಲಿಂಗ್‌ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಈಗ ದಾಖಲೆ ಪರಿಶೀಲನೆ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಮುಂದಿನ ವಿಚಾರಣೆಯವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಾಸ್ತವಿಕ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವುದಿಲ್ಲ” ಎಂದು ರಾಜ್ಯ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಕಳೆದ 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದ ಕೆಇಎ ಕ್ರಮ ಪ್ರಶ್ನಿಸಿ ಚಿಕ್ಕಮಗಳೂರಿನ ಆರ್‌ ಈಶ್ವರ್‌ ಸೇರಿದಂತೆ ಹಲವರು ಪ್ರತ್ಯೇಕವಾಗಿ ಸಲ್ಲಿಸಿರುವ ನಾಲ್ಕು ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಪ್ರತಿವಾದಿ ಕೆಇಎ ಯಾವುದೇ ತೆರನಾದ ದಾಖಲೆಗಳನ್ನು ಪರಿಶೀಲಿಸುವುದು ಪಕ್ಷಕಾರರ ಹಕ್ಕಿಗಾಗಲಿ, ವಾದಕ್ಕಾಗಲಿ ಪೂರ್ವಗ್ರಹಕ್ಕೆ ಎಡೆಮಾಡಿಕೊಡುವಂತಿರಬಾರದು. ಇದು ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ನಿಯಮ ಉಲ್ಲಂಘಿಸಿ ಆದೇಶ ಮಾಡುವುದಲ್ಲದೇ ಅದನ್ನು ಜಾರಿಗೊಳಿಸಲು ಕೆಇಎ ಮುಂದಾಗಿದೆ. 2021-22ನೇ ಶೈಕ್ಷಣಿಕ ವರ್ಷಕ್ಕೆ ಹಿಂದಿನ ವರ್ಷದ ಪಿಯು ಅಂಕ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ. ಇಲ್ಲಿ ಕಾಯಿದೆ ತಿದ್ದುಪಡಿ ಮಾಡದೇ ಆದೇಶ ಮುಂದುವರಿಸಲು ಕೆಇಎ ಮುಂದಾಗಿದೆ. ಇದಕ್ಕೆ ಬದಲಾಗಿ 2020-21, 2021-22ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಸಿಇಟಿಯಲ್ಲಿ ಪಡೆದಿರುವ ಅಂಕಗಳನ್ನು ಆಧರಿಸಿ ರ್ಯಾಂಕ್‌ ಪ್ರಕಟಿಸಬೇಕು. ಇದರಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ” ಎಂದು ಕೋರಿದರು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು “ನೈಜ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭವಾಗಿಲ್ಲ. ಈಗ ದಾಖಲೆ ಪರಿಶೀಲನೆ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಮುಂದಿನ ವಿಚಾರಣೆಯವರೆಗೆ ಕೆಇಎ ವಾಸ್ತವಿಕ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವುದಿಲ್ಲ” ಎಂದು ಪೀಠಕ್ಕೆ ತಿಳಿಸಿದರು.

ಇದನ್ನು ಪರಿಗಣಿಸಿದ ಪೀಠವು ಎಎಜಿ ಹೇಳಿಕೆಯನ್ನು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ವಿಚಾರಣೆಯ ಒಳಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬೇಕು” ಎಂದು ಆದೇಶದಲ್ಲಿ ಹೇಳಿದೆ.

ಇದಕ್ಕೂ ಮುನ್ನ ಪೀಠವು “2020-21ನೇ ಸಾಲಿನ ಪಿಯು ಅಂಕ ಪರಿಗಣಿಸದಿರುವುದಕ್ಕೆ ಸಂಬಂಧಿಸಿದಂತೆ ಕೆಇಎ ಉಪಬಂಧ (ಪ್ರಾವಿಸೊ) ಅಳವಡಿಸಬೇಕು. ಇಲ್ಲವೇ ಸಂವಿಧಾನದ 162ರ ಅಡಿ ಕಾರ್ಯಾದೇಶ ಮಾಡಬೇಕು” ಎಂದು ಹೇಳಿತು.

ಇದಕ್ಕೆ ರವಿಶಂಕರ್‌ ಅವರು “ನಿಯಮಕ್ಕೆ ವಿರುದ್ಧವಾಗಿ ಕಾರ್ಯಾದೇಶ ಮಾಡಲಾಗದು ಎಂಬುದು ನಮ್ಮ ಮೊದಲ ಆಕ್ಷೇಪವಾಗಿದೆ. ಅಲ್ಲದೇ, ಆಟ ಮುಗಿದ ಮೇಲೆ ಆಟದ ನಿಯಮಗಳನ್ನು ಬದಲಿಸಲಾಗದು ಎಂಬುದು ನಮ್ಮ ಎರಡನೇ ವಾದವಾಗಿದೆ. ಪರೀಕ್ಷೆ ಮುಗಿದು, ಫಲಿತಾಂಶ ಪ್ರಕಟಿಸಿರುವಾಗ ಕೆಇಎ ನಿಯಮ ಬದಲಿಸಲಾಗದು” ಎಂದು ಆಕ್ಷೇಪಿಸಿದರು.

ಇದಕ್ಕೆ ಪೀಠವು “ಆಟ ಈಗ ಆರಂಭವಾಗಿದೆ ಎಂಬುದು ಕೆಇಎ ವಾದವಾಗಿದೆ” ಎಂದಿತು. ಆಗಸ್ಟ್‌ 18ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಲಾಗಿದೆ.