Justice Sanjay Kishan Kaul, Justice Abhay S Oka 
ಸುದ್ದಿಗಳು

ಕೊಲಿಜಿಯಂ ಶಿಫಾರಸ್ಸು ತಡೆಹಿಡಿಯುವುದನ್ನು ಒಪ್ಪಲಾಗದು: ಕೇಂದ್ರ ಕಾನೂನು ಕಾರ್ಯದರ್ಶಿಗೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ

ನ್ಯಾಯಮೂರ್ತಿಗಳ ನೇಮಕಾತಿಗೆ ಒಪ್ಪಿಗೆ ನೀಡುವುದನ್ನು ತಡೆ ಹಿಡಿಯುವ ಮೂಲಕ ಅವರು ಸಮ್ಮತಿ ಹಿಂಪಡೆಯುವ ತಂತ್ರ ಕಂಡುಕೊಳ್ಳಲಾಗಿದೆ ಎಂದ ನ್ಯಾಯಾಲಯ.

Bar & Bench

ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮಾಡಿದ ಶಿಫಾರಸ್ಸುಗಳನ್ನು ತಡೆಹಿಡಿಯುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಕಾನೂನು ಕಾರ್ಯದರ್ಶಿಗೆ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ನೇಮಕಾತಿಗೆ ಶಿಫಾರಸ್ಸು ಮಾಡಲಾದ ಹೆಸರುಗಳನ್ನು ನೇಮಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿರುವುದು ಎರಡನೇ ನ್ಯಾಯಮೂರ್ತಿಗಳು ಪ್ರಕರಣದಲ್ಲಿ ನೀಡಿರುವ ಆದೇಶದ ಉಲ್ಲಂಘನೆಯಾಗಿದೆ ಎಂದು ವಕೀಲ ಎ ಪಿ ರಂಗನಾಥ್‌ ಅವರು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿದ್ದಾಗ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಅಭಯ್‌ ಶ್ರೀನಿವಾಸ್‌ ಓಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಎರಡನೇ ಬಾರಿಗೆ ಶಿಫಾರಸ್ಸು ಕಳುಹಿಸಿದ ಮೇಲೆ ನೇಮಕಾತಿ ಆದೇಶ ಮಾಡಬೇಕು. ಹೆಸರುಗಳನ್ನು ತಡೆ ಹಿಡಿಯುವುದನ್ನು ಒಪ್ಪಲಾಗದು; ನ್ಯಾಯಮೂರ್ತಿಗಳ ನೇಮಕಾತಿಗೆ ಒಪ್ಪಿಗೆ ನೀಡುವುದನ್ನು ತಡೆ ಹಿಡಿಯುವ ಮೂಲಕ ಅವರು ತಮ್ಮ ಸಮ್ಮತಿ ಹಿಂಪಡೆಯುವ ತಂತ್ರ ಕಂಡುಕೊಳ್ಳಲಾಗಿದೆ” ಎಂದು ಪೀಠ ಹೇಳಿದೆ.

ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕಾಸ್‌ ಸಿಂಗ್‌ ಅವರು “ಸುಪ್ರೀಂ ಕೋರ್ಟ್‌ಗೆ ನೇಮಕಾತಿ ಮಾಡಿರುವುದನ್ನು ತಡೆ ಹಿಡಿದಿರುವ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು. ನ್ಯಾ. ದೀಪಂಕರ್‌ ದತ್ತಾ ಅವರ ಹೆಸರನ್ನು (ಸುಪ್ರೀಂ ಕೋರ್ಟ್‌ಗೆ) ಶಿಫಾರಸ್ಸು ಮಾಡಿ ಐದು ವಾರಗಳು ಕಳೆದಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಒಪ್ಪಿಗೆ ನೀಡಬೇಕಿತ್ತು” ಎಂದರು

ಪೀಠವು ತನ್ನ ಆದೇಶದಲ್ಲಿ, "ಕೇಂದ್ರ ಸರ್ಕಾರದ ಬಳಿ 11 ಹೆಸರುಗಳು ಬಾಕಿ ಇವೆ. 2021ರ ಸೆಪ್ಟೆಂಬರ್‌ನಲ್ಲಿ ಮಾಡಲಾದ ಶಿಫಾರಸ್ಸಿಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಇದು ಅತ್ಯಂತ ಹಳೆಯ ಶಿಫಾರಸ್ಸಾಗಿದೆ" ಎಂದಿತು. ಮುಂದುವರೆದು, "ಎರಡನೇ ಬಾರಿಗೆ ಹೆಸರುಗಳನ್ನು ಶಿಫಾರಸ್ಸು ಮಾಡಿ ಪುನರುಚ್ಚರಿಸಿದರೂ ಅವುಗಳಿಗೆ ಸರ್ಕಾರ ಒಪ್ಪಿಲ್ಲ. ಕೆಲವರು ತಮ್ಮ ಒಪ್ಪಿಗೆ ಹಿಂಪಡೆದಿದ್ದು, ಸಮರ್ಥ ವ್ಯಕ್ತಿಯನ್ನು ಪೀಠದಲ್ಲಿ ಕಾಣುವ ಅವಕಾಶವನ್ನು ನ್ಯಾಯಾಲಯ ಕಳೆದುಕೊಳ್ಳಲಿದೆ... ಸಮರ್ಥ ನ್ಯಾಯಮೂರ್ತಿಗಳು ಪೀಠಕ್ಕೆ ಬರದಿದ್ದರೆ ಕಾನೂನು ಮತ್ತು ನ್ಯಾಯಾದಾನ ಪ್ರಕ್ರಿಯೆಗೆ ಹಿನ್ನಡೆಯಲಾಗಲಿದೆ. ಸುಪ್ರೀಂ ಕೋರ್ಟ್‌ ನೇಮಕಾತಿಗಳನ್ನೂ ತಿಂಗಳುಗಟ್ಟಲೇ ಬಾಕಿ ಇಡಲಾಗಿದೆ ಎಂದು ವಿಕಾಸ್‌ ಸಿಂಗ್‌ ತಿಳಿಸಿದ್ದಾರೆ. ಯಾವ ಕಾರಣಕ್ಕಾಗಿ ತಡ ಮಾಡಲಾಗುತ್ತಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ” ಎಂದು ಪೀಠ ಹೇಳಿದೆ. ಹೀಗಾಗಿ, ಉತ್ತರಿಸುವಂತೆ ಕೇಂದ್ರ ಕಾನೂನು ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.