Family Court, Ernakulam 
ಸುದ್ದಿಗಳು

ಕೌಟುಂಬಿಕ ನ್ಯಾಯಾಲಯದಾಚೆ ವಿವಾದ ಇತ್ಯರ್ಥ: 'ಸಾಮರಸ್ಯ ತಾಣ' ಆರಂಭಿಸಿದ ಕೇರಳ ಕಾನೂನು ಸೇವಾ ಪ್ರಾಧಿಕಾರ

ಈ ಯೋಜನೆ ಆಪ್ತಸಮಾಲೋಚನೆ, ಮಧ್ಯಸ್ಥಿಕೆ ಸೇವೆ, ನಾನ್ ಬೈಂಡಿಂಗ್ ಕಾನೂನು ಮಾರ್ಗದರ್ಶನ ಅಥವಾ ಕಾನೂನು ನೆರವು, ಭಾವನಾತ್ಮಕ ಬೆಂಬಲ ಹಾಗೂ ಕ್ಷೇಮ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತದೆ.

Bar & Bench

ಕೌಟುಂಬಿಕ ವ್ಯಾಜ್ಯಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ  (ಕೆಲ್ಸಾ- KeLSA) ಸಾಮರಸ್ಯ ತಾಣ (ಹಾರ್ಮನಿ ಹಬ್) ಎಂಬ ವಿಶಿಷ್ಟ ಯೋಜನೆ ಪ್ರಾರಂಭಿಸಿದೆ.

ಜನವರಿ 15 ರಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಕೆಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಅವರು ಯೋಜನೆ ಉದ್ಘಾಟಿಸಿದರು.

ದುಬಾರಿ ಮತ್ತು ಸಮಯ ಹಿಡಿಯುವ ವ್ಯಾಜ್ಯಗಳನ್ನು ತಪ್ಪಿಸುವ ಮೂಲಕ ಹಾಗೂ ಕಕ್ಷಿದಾರರ ನಡುವೆ ಸೌಹಾರ್ದಯುತವಾಗಿ ವ್ಯಾಜ್ಯಗಳನ್ನು ಬಗೆಹರಿಸುವ ಮೂಲಕ ನ್ಯಾಯಾಲಯಗಳ ಮೇಲಿನ ಪ್ರಕರಣದ ಬಾಕಿಯ ಹೊರೆಯನ್ನು 'ಸಾಮರಸ್ಯ ತಾಣʼ ತಗ್ಗಿಸುವ ನಿರೀಕ್ಷೆಯಿದೆ.

ಈ ಯೋಜನೆ ಆಪ್ತಸಮಾಲೋಚನೆ, ಮಧ್ಯಸ್ಥಿಕೆ ಸೇವೆ, ಕಾನೂನು ಮಾರ್ಗದರ್ಶನ ಅಥವಾ ಕಾನೂನು ನೆರವು, ಭಾವನಾತ್ಮಕ ಬೆಂಬಲ ಹಾಗೂ ಕ್ಷೇಮ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತದೆ.

ದಾವೆದಾರರು ಯೋಜನೆಯಡಿ ಸೇವೆ ಪಡೆಯಲು ರಾಜ್ಯದ ಹದಿನಾಲ್ಕು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ಒಂದನ್ನು ಸಂಪರ್ಕಿಸಬಹುದು.

ವಿವಾಹ ಸಂಬಂಧಗಳಷ್ಟೇ ಅಲ್ಲದೆ, ಸಹಜೀವನದಂತಹ ಮದುವೆಯ ಸ್ವರೂಪದಲ್ಲಿನ ಸಂಬಂಧಗಳು ಸಹ ಸಾಮರಸ್ಯ ತಾಣದ ವ್ಯಾಪ್ತಿಗೆ ಬರುತ್ತವೆ. ಪ್ರಕ್ರಿಯೆಯಲ್ಲಿ ಹಂಚಿಕೊಳ್ಳಲಾಗುವ ಎಲ್ಲಾ ಚರ್ಚೆ, ದಾಖಲೆಗಳು ಮತ್ತು ಮಾಹಿತಿ ಕಟ್ಟುನಿಟ್ಟಾಗಿ ಗೌಪ್ಯವಾಗಿರುತ್ತದೆ.

ಒಂದೊಮ್ಮೆ ಜಾರಿಗೊಳಿಸಬೇಕಾದ ನಿಯಮವನ್ನು ರಾಜಿ ಒಪ್ಪಂದ ಹೊಂದಿದ್ದರೆ, ಅಂತಹ ಪ್ರಕರಣವನ್ನು ಲೋಕ್ ಅದಾಲತ್‌ ಮುಂದೆ ಮಂಡಿಸಬಹುದು. ನಂತರ ಅದು ಒಪ್ಪಂದದ ನಿಯಮಗಳ ಆಧಾರದ ಮೇಲೆ ತೀರ್ಪು ನೀಡಲಿದೆ. ಈ ಪ್ರಕ್ರಿಯೆ ರಾಜಿ ಸಂಧಾನವನ್ನು ಔಪಚಾರಿಕವಾಗಿ ಗುರುತಿಸಲು ಮತ್ತು ಕಾನೂನುಬದ್ಧವಾಗಿ ಹಿಡಿದಿಡಲು ಅನುಮತಿಸುತ್ತದೆ. ಇದು ದೀರ್ಘಾವಧಿಯ ದಾವೆಯ ಅಗತ್ಯವಿಲ್ಲದೆಯೇ ರಾಜಿ ಸಂಧಾನ ಪಾಲನೆ ಖಚಿತಪಡಿಸಿಕೊಳ್ಳಲು ಪಕ್ಷಕಾರರಿಗೆ ತ್ವರಿತ ಮತ್ತು ಹೆಚ್ಚು ದಕ್ಕಬಹುದಾದ ಮಾರ್ಗ ಕಲ್ಪಿಸುತ್ತದೆ.