Pinarayi Vijayan 
ಸುದ್ದಿಗಳು

ಕೃಷಿ ಕಾಯಿದೆಗಳ ವಿರುದ್ಧ ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ; ವಿರೋಧಿಸದ ಬಿಜೆಪಿಯ ಏಕೈಕ ಶಾಸಕ

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ ನಿರ್ಣಯಕ್ಕೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಕೂಡ ಬೆಂಬಲ ವ್ಯಕ್ತಪಡಿಸಿತು.

Bar & Bench

ಪೌರತ್ವ ತಿದ್ದುಪಡಿ ಕಾಯಿದೆಯ (ಸಿಎಎ) ವಿರುದ್ಧ ನಿರ್ಣಯ ಅಂಗೀಕರಿಸಿದ ಒಂದು ವರ್ಷದ ಬಳಿಕ, ಕೇರಳ ವಿಧಾನಸಭೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಗುರುವಾರ ಕರೆಯಲಾಗಿದ್ದ ವಿಶೇಷ ಅಧಿವೇಶನದ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿರ್ಣಯ ಮಂಡಿಸಿದರು. ನಿರ್ಣಯಕ್ಕೆ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (ಯುಡಿಎಫ್‌) ಕೂಡ ಬೆಂಬಲ ವ್ಯಕ್ತಪಡಿಸಿತು.

ಅಚ್ಚರಿಯ ಸಂಗತಿ ಎಂದರೆ ಬಿಜೆಪಿಯ ಏಕೈಕ ಶಾಸಕ ಒ ರಾಜಗೋಪಾಲ್‌ ಅವರು ಕಾಯಿದೆಗಳನ್ನು ಬೆಂಬಲಿಸಿ ಮಾತನಾಡಿದರೂ ನಿರ್ಣಯವನ್ನು ವಿರೋಧಿಸಲಿಲ್ಲ. ತಮ್ಮ ಭಾಷಣದ ವೇಳೆ ಅವರು “ಮೋದಿ ಸರ್ಕಾರ ಪರಿಚಯಿಸಿದ ಎಲ್ಲವನ್ನೂ ವಿರೋಧಿಸುವ ಪ್ರವೃತ್ತಿ ಇದೆ” ಎಂದು ಹೇಳಿದರು. ಮತದಾನದಿಂದ ದೂರ ಉಳಿದಿದ್ದ ಅವರು ನಂತರ ʼಸರ್ಕಾರ ಮಂಡಿಸಿದ ನಿರ್ಣಯದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ನಿರ್ಣಯದ ಆಶಯವನ್ನು ಬೆಂಬಲಿಸುತ್ತಿರುವುದಾಗಿ ಸೂಚಿಸಿದರು.

ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕೃಷಿ ಕಾನೂನುಗಳು ದೂರವಿಟ್ಟಿವೆ. ಕಾಯಿದೆಗಳು ರೈತ ವಿರೋಧಿ ಮತ್ತು ಕಾರ್ಪೊರೇಟ್‌ ಪರವಾಗಿವೆ ಎಂದು ನಿರ್ಣಯ ಗಮನ ಸೆಳೆಯಿತು. ಇದು ಗ್ರಾಹಕ ರಾಜ್ಯವಾದ ಕೇರಳದ ಮೇಲೂ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದರು. ಹೀಗಾಗಿ ಈ ಕಾಯಿದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕು ಎಂದು ಒತ್ತಾಯಿಸಿತು.

ಆಶ್ಚರ್ಯಕರ ಸಂಗತಿ ಎಂದರೆ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಆರಂಭದಲ್ಲಿ ನಿರಾಕರಿಸಿದ್ದರು. ರಾಜ್ಯ ಸಚಿವ ಸಂಪುಟದ ಸಲಹೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ರಾಜ್ಯಪಾಲರಿಗೆ ಅಧಿಕಾರವಿಲ್ಲ ಮತ್ತು ಸಾಂವಿಧಾನಿಕ ಯೋಜನೆಯ ಪ್ರಕಾರ ವಿಧಾನಸಭೆ ಸಭೆ ನಡೆಸಲು ಅದು ಬದ್ಧವಾಗಿದೆ ಎಂದು ಖಾನ್‌ ಅವರಿಗೆ ಬರೆದ ಪತ್ರದಲ್ಲಿ ಪಿಣರಾಯಿ ತಿರುಗೇಟು ನೀಡಿದ್ದರು. ಅಲ್ಲದೆ ಇಬ್ಬರು ಸಚಿವರು ರಾಜ್ಯಪಾಲರ ಬಳಿ ತೆರಳಿ ಮನವೊಲಿಸಿದ ಬಳಿಕ ವಿಶೇಷ ಅಧಿವೇಶನಕ್ಕೆ ಒಪ್ಪಿಗೆ ದೊರೆತಿತ್ತು. ಆದರೆ ರಾಜ್ಯಪಾಲರ ನಿರ್ಧಾರಕ್ಕೆ ಗಟ್ಟಿಯಾದ ದನಿಯಲ್ಲಿ ಖಂಡನೆ ವ್ಯಕ್ತವಾಗಿರಲಿಲ್ಲ.

ರಾಜ್ಯಪಾಲರ ಕ್ರಮ ಖಂಡಿಸದ ಎಡ ಸರ್ಕಾರದ ನಿಲುವಿನ ಕುರಿತಂತೆ ಯುಡಿಎಫ್‌ ವ್ಯಂಗ್ಯವಾಡಿದೆ. ರಾಜ್ಯಪಾಲರ ಕ್ರಮಗಳಿಗೆ ಸರ್ಕಾರದ ಪ್ರತಿಕ್ರಿಯೆ ಸೌಮ್ಯವಾಗಿದೆ. ಮತ್ತು ರಾಜ್ಯಪಾಲರ ಮನವೊಲಿಸಲು ಸಚಿವರನ್ನು ಕಳುಹಿಸುವ ಅಗತ್ಯವಿರಲಿಲ್ಲ ಎಂದು ಕಾಂಗ್ರೆಸ್‌ ನಾಯಕ ಕೆ ಸಿ ಜೋಸೆಫ್‌ ತಿಳಿಸಿದ್ದಾರೆ. ಕಾಯಿದೆಗಳು ಸಂವಿಧಾನದತ್ತವಾಗಿ ದೊರೆತ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿವೆ ಎಂದು ಕೂಡ ಯುಡಿಎಫ್‌ ಆಕ್ಷೇಪ ವ್ಯಕ್ತಪಡಿಸಿತ್ತು. 2019ರ ಡಿಸೆಂಬರ್‌ನಲ್ಲಿ ಕೂಡ ಕೇರಳ ಸರ್ಕಾರ ಪೌರತ್ವ ತಿದ್ದುಪಡಿ ಕಾಯಿದೆಗಳ (ಸಿಎಎ) ವಿರುದ್ಧ ನಿರ್ಣಯ ಅಂಗೀಕರಿಸಿತ್ತು.