ಶಾಶ್ವತ ಲೋಕ ಅದಾಲತ್‌ಗಳಿಗೆ ಆನ್‌ಲೈನ್ ಫೈಲಿಂಗ್ ಮತ್ತು ವಿಚಾರಣೆ ಸೌಲಭ್ಯಗಳನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ರಾಜ್ಯ ಪಾತ್ರವಾಗಿದೆ.
ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಇಎಲ್‌ಎಸ್‌ಎ) ಈ ಯೋಜನೆ ವಿಶೇಷವಾಗಿ ಸಮಾಜದಂಚಿನಲ್ಲಿರುವ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಯತ್ನಿಸುತ್ತದೆ.
ಆನ್‌ಲೈನ್ ಫೈಲಿಂಗ್ ವ್ಯವಸ್ಥೆಯನ್ನು ಏಪ್ರಿಲ್ 11ರಂದು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿತಿನ್ ಎಂ ಜಾಮ್ದಾರ್ ಅವರು ಕೆಇಎಲ್‌ಎಸ್‌ಎ ಆಯೋಜಿಸಿದ್ದ ಸಮಾರಂಭದಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು.
ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬ ನಾಗರಿಕರಿಗೂ ಸುಲಭವಾಗಿ ಮತ್ತು ಕೈಗೆಟಕುವ ದರದಲ್ಲಿ ನ್ಯಾಯ ದೊರಕಿಸಿಕೊಡಬೇಕು ಎಂಬ ಕೇರಳ ನ್ಯಾಯಾಂಗದ ದೂರದೃಷ್ಟಿಯ ಫಲ ಲೋಕ ಅದಾಲತ್‌ಗಳ ಈ ಡಿಜಿಟಲ್ ಪರಿವರ್ತನೆ.
ಕೇರಳ ನ್ಯಾಯಾಂಗ ತಿರುವನಂತಪುರಂ, ಎರ್ನಾಕುಲಂ ಹಾಗೂ ಕೋಯಿಕ್ಕೋಡ್‌ನಲ್ಲಿ ಪ್ರಸ್ತುತ ಮೂರು ಶಾಶ್ವತ ಲೋಕ ಅದಾಲತ್‌ಗಳನ್ನು ಆಯೋಜಿಸುತ್ತಿದೆ.
ಇಲ್ಲಿಯವರೆಗೆ, ದಾವೆ ಹೂಡುವವರು ಈ ಕೇಂದ್ರಗಳಿಗೆ ಹೋಗಿ ಸಣ್ಣಪುಟ್ಟ ದೂರುಗಳನ್ನು ಸಹ ಖುದ್ದಾಗಿ ಸಲ್ಲಿಸಬೇಕಾಗಿತ್ತು. ಇದು ದೂರದ ಪ್ರದೇಶಗಳಲ್ಲಿ ವಾಸಿಸುವವರಿಗೆ ನ್ಯಾಯದೊರಕಿಸಿಕೊಡಲು ಮೂಲತಃ ಅಡ್ಡಿಯುಂಟುಮಾಡುತ್ತಿತ್ತು. ಆದರೆ ಈಗ, ಅರ್ಜಿದಾರರು ರಾಜ್ಯದ ಎಲ್ಲಿಂದಲಾದರೂ ತಮ್ಮ ಪ್ರಕರಣಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.
ಮೇ ಮೊದಲ ವಾರದಿಂದ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿರುವ ಈ ಸೇವೆ ಆನ್‌ಲೈನ್ ವಿಚಾರಣೆಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಸಹ ಒಳಗೊಂಡಿದೆ.
ಎಲ್ಲರನ್ನೂ ಒಳಗೊಳ್ಳುದಕ್ಕಾಗಿ ಮತ್ತು ಸುಲಭವಾಗಿ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಆನ್‌ಲೈನ್ ಫೈಲಿಂಗ್ ಮತ್ತು ವಿಚಾರಣಾ ಸೌಲಭ್ಯಗಳನ್ನು ಇ-ಸೇವಾ ಕೇಂದ್ರಗಳ ಮೂಲಕ ಮತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತದೆ.