Karnataka High Court 
ಸುದ್ದಿಗಳು

ಎಸ್‌ಐಎಫ್‌ಒ ತನಿಖೆ ತಡೆ ಕೋರಿ ಹೈಕೋರ್ಟ್‌ ಕದತಟ್ಟಿದ ಕೇರಳ ಸಿಎಂ ಪಿಣರಾಯಿ ವಿಜಯನ್‌ ಪುತ್ರಿ ವೀಣಾ

ಎಸ್‌ಎಫ್‌ಐಒ 2024ರ ಜನವರಿ 31ರಂದು ಹೊರಡಿಸಿರುವ ಆದೇಶ ವಜಾ ಮಾಡುವಂತೆ ಕೋರಲಾಗಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

Bar & Bench

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ ವೀಣಾ ನಿರ್ದೇಶಕಿಯಾಗಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎಕ್ಸಾಲಾಜಿಕ್‌ ಸಲ್ಯೂಷನ್ಸ್‌ ವಿರುದ್ಧ ಕೇಂದ್ರ ಸರ್ಕಾರವು ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ತನಿಖೆಗೆ ಆದೇಶಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಮಧ್ಯಂತರ ಕ್ರಮವಾಗಿ ತನಿಖೆಗೆ ತಡೆ ನೀಡಬೇಕು ಮತ್ತು ಆದೇಶಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಲು ಆದೇಶಿಸಬೇಕು ಎಂದು ಮನವಿ ಮಾಡಲಾಗಿದೆ.

ಎಸ್‌ಎಫ್‌ಐಒ 2024ರ ಜನವರಿ 31ರಂದು ಹೊರಡಿಸಿರುವ ಆದೇಶ ವಜಾ ಮಾಡುವಂತೆ ಕೋರಲಾಗಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

ರಿಜಿಸ್ಟ್ರಾರ್‌ ಆಫ್‌ ಕಂಪೆನೀಸ್‌ ಎಕ್ಸಾಲಾಜಿಕ್‌ ವಿರುದ್ಧ ನಡೆಸಿದ ಪ್ರಾಥಮಿಕ ತನಿಖೆ ಆಧರಿಸಿ ಎಸ್‌ಎಫ್‌ಐಒ ಕ್ರಮಕೈಗೊಂಡಿದೆ. ಎಕ್ಸಾಲಾಜಿಕ್‌ಗೆ 1.72 ಕೋಟಿ ರೂಪಾಯಿ ಪಾವತಿಸಿರುವುದಕ್ಕೆ ವಿನಾಯಿತಿ ನೀಡುವಂತೆ ಕೊಚ್ಚಿನ್‌ ಮಿನರಲ್ಸ್‌ ಮತ್ತು ರುಟೈಲ್‌ ಲಿಮಿಟೆಡ್‌ (ಸಿಎಂಆರ್‌ಎಲ್‌) ಕೋರಿದ್ದ ಮನವಿಯನ್ನು ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿ ನಿರಾಕರಿಸಿತ್ತು ಎನ್ನಲಾಗಿದೆ.

ಸಿಎಂಆರ್‌ಎಲ್‌ನಲ್ಲಿ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ಕಾರ್ಪೊರೇಶನ್‌ (ಕೆಎಸ್‌ಐಡಿಸಿ) ಶೇ. 13ರಷ್ಟು ಷೇರು ಹೊಂದಿದೆ. ಈಚೆಗೆ ಸಿಎಂಆರ್‌ಎಲ್‌ನ ಕೊಚ್ಚಿ ಕಚೇರಿಯಲ್ಲಿ ಎಸ್‌ಎಫ್‌ಐಒ ಶೋಧ ನಡೆಸಿತ್ತು. ಆನಂತರ ಕೆಎಸ್‌ಐಡಿಸಿ ಕಚೇರಿಯಲ್ಲಿ ದಾಖಲೆ ಪರಿಶೀಲಿಸಿತ್ತು. ಇದನ್ನು ಪ್ರಶ್ನಿಸಿ ಕೆಎಸ್‌ಐಡಿಸಿ ಕೇರಳ ಹೈಕೋರ್ಟ್‌ ಮೆಟ್ಟಿಲೇರಿತ್ತು. ಸರ್ಕಾರಿ ಒಡೆತನದ ಸಂಸ್ಥೆ ಭೀತಿಗೊಂಡಿರುವುದೇಕೆ ಎಂದು ಎಸ್‌ಎಫ್‌ಐಒ ಪ್ರಶ್ನಿಸಿತ್ತು.