Addl Sessions Judge allows alleged Maoist leader internet access for legal research  
ಸುದ್ದಿಗಳು

ಕಾನೂನು ಮಾಹಿತಿಗಾಗಿ ಅಂತರ್ಜಾಲ ಬಳಕೆ: ಶಂಕಿತ ಮಾವೋವಾದಿಗೆ ಅವಕಾಶ ನೀಡಿದ ಕೇರಳ ನ್ಯಾಯಾಲಯ

ʼತನ್ನ ಪರವಾಗಿ ವಾದ ಮಂಡಿಸಲು ಕಾನೂನು ಅಧ್ಯಯನ ಮಾಡಬೇಕಿದೆ. ಇದಕ್ಕಾಗಿ ಅಂತರ್ಜಾಲ ಸೌಕರ್ಯ ಒದಗಿಸುವಂತೆʼ ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿದ ಆರೋಪ ಎದುರಿಸುತ್ತಿರುವ ರೂಪೇಶ್‌ ಅವರು ಎರ್ನಾಕುಲಂನ ನ್ಯಾಯಾಲಯವೊಂದರ ಮೊರೆ ಹೋಗಿದ್ದರು.

Bar & Bench

ಸೀಮಿತ ನೆಲೆಯಲ್ಲಿ ಅಂತರ್ಜಾಲ ಮಾಹಿತಿ ಬಳಸಲು ಎರ್ನಾಕುಲಂನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಮಾವೋವಾದಿ ನಂಟಿನ ಆರೋಪ ಹೊತ್ತ ವ್ಯಕ್ತಿಯೊಬ್ಬರಿಗೆ ಅವಕಾಶ ನೀಡಿದೆ. ʼತನ್ನ ಪರವಾಗಿ ವಾದ ಮಂಡಿಸುವ ಉದ್ದೇಶದಿಂದ ಕಾನೂನು ಅಧ್ಯಯನ ಮಾಡಬೇಕಿದೆ. ಇದಕ್ಕಾಗಿ ಅಂತರ್ಜಾಲ ಸೌಕರ್ಯ ಒದಗಿಸುವಂತೆʼ ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿದ ಆರೋಪ ಎದುರಿಸುತ್ತಿರುವ ರೂಪೇಶ್‌ ಅವರು ಎರ್ನಾಕುಲಂ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವನ್ನು ಕೋರಿದ್ದರು.

ತಮ್ಮ ಪರವಾಗಿ ಖುದ್ದು ವಾದ ಮಂಡಿಸುತ್ತಿರುವ ರೂಪೇಶ್‌ ʼಅಂತರ್ಜಾಲದ ಸಂಪರ್ಕ ಪಡೆಯುವುದು ಮೂಲಭೂತ ಹಕ್ಕಾಗಿದ್ದು ಕೇರಳ ಕಾರಾಗೃಹಗಳಲ್ಲಿರುವ ವಿದೇಶಿ ನಾಗರಿಕರು ಕಾನೂನು ನೆರವು ಪಡೆಯಲು ಅಂತರ್ಜಾಲ ಸೌಲಭ್ಯ ಪಡೆಯುವುದಕ್ಕೆ ಕೇರಳದ ಜೈಲು ನಿಯಮಾವಳಿಗಳಲ್ಲಿ ಅವಕಾಶವಿದೆ. ಹೀಗಾಗಿ ತನಗೆ ಈ ಹಕ್ಕನ್ನು ನಿರಾಕರಿಸುವುದು ತಾರತಮ್ಯ ಎಸಗಿದಂತಾಗಿದೆʼ ಎಂದು ಹೇಳಿದ್ದರು.

Roopesh being produced at a Court

ವಾದದಲ್ಲಿ ಹುರುಳಿರುವುದನ್ನು ಗಮನಿಸಿದ ನ್ಯಾಯಾಧೀಶ ಪಿ. ಕೃಷ್ಣಕುಮಾರ್‌ ಅವರು ʼಸಾಂವಿಧಾನಿಕ ನ್ಯಾಯಾಲಯಗಳು ಕಾನೂನು ನೆರವು ಪಡೆಯುವುದು ಮತ್ತು ಅಂತರ್ಜಾಲ ಸಂಪರ್ಕ ಪಡೆಯುವುದು ಮೂಲಭೂತ ಹಕ್ಕು ಎಂದು ಪರಿಗಣಿಸಿರುವಾಗ ಅರ್ಜಿದಾರ ತನ್ನ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ಸಮರ್ಥಿಸಿಕೊಳ್ಳಲು ಕಾನೂನು ಸಾಮಗ್ರಿಗಳನ್ನು ಬಳಸಿಕೊಳ್ಳುವುದಕ್ಕಾಗಿ ಅನುಮತಿ ಕೇಳಲು ಎಲ್ಲ ರೀತಿಯ ಅರ್ಹತೆ ಹೊಂದಿದ್ದಾರೆ…ʼ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ʼಸೂಕ್ತ ರೀತಿಯಲ್ಲಿ ನಿಯಂತ್ರಿಸಲು ಮತ್ತು ದುರುಪಯೋಗ ತಡೆಯಲು ಸಾಕಷ್ಟು ಯಾಂತ್ರಿಕ ವ್ಯವಸ್ಥೆ ಇದ್ದಲ್ಲಿ ಮಾತ್ರ ಅಂತಹ ಸೌಲಭ್ಯ ಒದಗಿಸಬಹುದುʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟುಗಳ ಜಾಲತಾಣಗಳು ಹಾಗೂ ಇಂಡಿಯನ್‌ ಕಾನೂನ್‌, ಇಂಡಿಯನ್‌ ಕೋಡ್‌ ರೀತಿಯ ಜಾಲತಾಣಗಳನ್ನು ಬಳಸಲು ರೂಪೇಶ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ವಾರಕ್ಕೆ 45 ನಿಮಿಷಗಳ ಅಂತರ್ಜಾಲ ಬಳಸಲು ಅವಕಾಶ ಮಾಡಿಕೊಟ್ಟಿರುವ ನ್ಯಾಯಾಲಯ ʼಅವರ ಕಂಪ್ಯೂಟರ್‌ ಬಳಕೆ ಮೇಲೆ ನಿಗಾ ಇಡಬೇಕು, ಅಕ್ರಮ ಚಟುವಟಿಕೆಗಳಿಗೆ ಅಂತರ್ಜಾಲ ಬಳಸದಂತೆ ತಡೆಯಲು ಹಾರ್ಡ್‌ವೇರ್‌ ಫೈರ್‌ವಾಲ್‌ ಅಳವಡಿಸಬೇಕುʼ ಎಂದು ವಿಯ್ಯೂರು ಜೈಲು ಸಿಬ್ಬಂದಿಗೆ ಸೂಚಿಸಿದೆ.

ಇದೇ ವೇಳೆ ರೂಪೇಶ್‌ ಅವರ ಕಾನೂನು ಪರಿಣತಿ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ನ್ಯಾಯಾಧೀಶರು ʼಅರ್ಜಿದಾರರ ಕಾನೂನು ಕೌಶಲ್ಯವನ್ನು ಹಲವಾರು ಸಂದರ್ಭಗಳಲ್ಲಿ ನೋಡುವ ಅವಕಾಶ ನ್ಯಾಯಾಲಯಕ್ಕೆ ಒದಗಿ ಬಂದಿತ್ತು. (ರೂಪೇಶ್)‌ ಅವರು ಸದಾ ಕಾನೂನು ಸಿದ್ಧತೆ ಮಾಡಿಕೊಂಡು ಪೀಠದೆದುರು ಹಾಜರಾಗುತ್ತಾರೆ. ಅವರೊಬ್ಬ ಕಾನೂನು ಪದವೀಧರʼ ಎಂದಿದೆ.

ರೂಪೇಶ್‌ ಅವರನ್ನು ಮಾವೋವಾದಿ ನಾಯಕ ಎಂದು ಆರೋಪಿಸಿ 2015ರಿಂದಲೂ ಬಂಧನದಲ್ಲಿಡಲಾಗಿದೆ. ಅವರ ವಿರುದ್ಧ 40 ಪ್ರಕರಣಗಳನ್ನು ದಾಖಲಿಸಾಗಿದೆ. ಕಳೆದ ವರ್ಷ ರೂಪೇಶ್‌ ವಿರುದ್ಧ ಹೊರಿಸಲಾಗಿದ್ದ ರಾಷ್ಟ್ರದ್ರೋಹ ಪ್ರಕರಣವನ್ನು ಕೇರಳ ಹೈಕೋರ್ಟ್‌ ರದ್ದುಪಡಿಸಿತ್ತು. ಕಳೆದ ತಿಂಗಳಷ್ಟೇ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ (ಯುಎಪಿಎ) ದಾಖಲಾಗಿದ್ದ ಎರಡು ಪ್ರಕರಣಗಳಿಂದ ಅವರು ದೋಷಮುಕ್ತರಾಗಿದ್ದರು.