Boby Chemmanur, Ernakulam District and Sessions Court Complex 
ಸುದ್ದಿಗಳು

ಲೈಂಗಿಕ ಕಿರುಕುಳ ಪ್ರಕರಣ: ಚೆಮ್ಮನೂರ್ ಜ್ಯೂಯಲರ್ಸ್ ಮಾಲೀಕನಿಗೆ ಜಾಮೀನು ನಿರಾಕರಿಸಿದ ಕೇರಳ ನ್ಯಾಯಾಲಯ

ಮಳಿಗೆ ಉದ್ಘಾಟನಾ ಸಮಾರಂಭದದಲ್ಲಿ ನಡೆದ ವೈಯಕ್ತಿಕ ಸಂವಾದದ ವೇಳೆ ಬಾಬಿ ಚೆಮ್ಮನೂರ್ ಅವರು ಅನುಚಿತ ಹೇಳಿಕೆ ನೀಡಿದ್ದರು ಎಂದು ಮಲಯಾಳಂ ನಟಿಯೊಬ್ಬರು ಆರೋಪಿಸಿದ್ದರು.

Bar & Bench

ಮಲಯಾಳಂ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ  ಬಂಧನಕ್ಕೊಳಗಾಗಿದ್ದ ಚೆಮ್ಮನೂರ್‌ ಜ್ಯೂಯಲರ್ಸ್‌ ಮಾಲೀಕ ಬಾಬಿ ಚೆಮ್ಮನೂರ್ ಅವರಿಗೆ ಜಾಮೀನು ನೀಡಲು ಕೇರಳದ ನ್ಯಾಯಾಲಯವೊಂದು ಗುರುವಾರ ನಿರಾಕರಿಸಿದೆ.

ಎರ್ನಾಕುಲಂನ ಜೆಎಫ್‌ಸಿಎಂ- II ನ್ಯಾಯಾಲಯ ಬಾಬಿ ಅವರನ್ನು 14 ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿದ್ದು ನ್ಯಾಯಾಧೀಶರಾದ ಅಭಿರಾಮಿ ಎ ಅವರು ಚೆಮ್ಮನೂರ್‌ ನಿರಪರಾಧಿ ಎಂಬ ವಾದವನ್ನು ತಿರಸ್ಕರಿಸಿದರು. ಲೈಂಗಿಕ ಛಾಯೆಯ ಮಾತುಗಳನ್ನು ಬಳಸುವ ಅಭ್ಯಾಸ ಬಾಬಿ ಅವರಿಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಬಾಬಿ ಒಡೆತನದ ಮಳಿಗೆ ಉದ್ಘಾಟನಾ ಸಮಾರಂಭದದಲ್ಲಿ ನಡೆದ ವೈಯಕ್ತಿಕ ಸಂವಾದದ ವೇಳೆ ಬಾಬಿ ಚೆಮ್ಮನೂರ್ ಅವರು ಅನುಚಿತ ಹೇಳಿಕೆ ನೀಡಿದ್ದರು ಎಂದು ಮಲಯಾಳಂ ನಟಿ ದೂರಿದ್ದರು. ತಮ್ಮ ಬಗ್ಗೆ ಉಳಿದವರು ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್‌ ವೇದಿಕಗಳಲ್ಲಿ ಲೈಂಗಿಕವಾಗಿ ಅನುಚಿತ ಹೇಳಿಕೆಗಳನ್ನು ನೀಡಲು ಬಾಬಿ ಅವರ ಹೇಳಿಕೆ  ಪ್ರೇರೇಪಿಸಿದೆ ಎಂದಿದ್ದರು.

 ಬಾಬಿ ಅವರನ್ನು ಜನವರಿ 8ರಂದು ವಯನಾಡ್‌ನಲ್ಲಿ ಬಂಧಿಸಲಾಯಿತು. ಬಿಎನ್‌ಎಸ್‌ ಕಾಯಿದೆಯ ಸೆಕ್ಷನ್ 75 (1) (i) (ದೈಹಿಕ ಸಂಪರ್ಕ, ಮತ್ತು ಅನಪೇಕ್ಷಿತ ಹಾಗೂ ಲೈಂಗಿಕ ಪ್ರಲೋಭನೆಗಳನ್ನು ಒಳಗೊಂಡ ಕ್ರಿಯೆ) 75 (1) (iv) (ಲೈಂಗಿಕ ಕಿರುಕುಳದ ಒಂದು ರೂಪವಾಗಿ ಲೈಂಗಿಕ ಛಾಯೆಯ ಹೇಳಿಕೆ ನೀಡುವುದು) ಹಾಗೂ ಐಟಿ ಸೆಕ್ಷನ್‌ 67ರ ಅಡಿ (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಸ್ತುವಿಷಯ ಪ್ರಕಟಿಸುವುದು ಇಲ್ಲವೇ ಹಂಚಿಕೊಳ್ಳುವುದು) ಅವರ ವಿರುದ್ಧ  ಪ್ರಕರಣ ದಾಖಲಿಸಲಾಗಿತ್ತು. ಜಾಮೀನು ಕೋರಿ ಬಾಬಿ ಅವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮೊರೆ ಹೋಗಿದ್ದರು.