Kantara 
ಸುದ್ದಿಗಳು

ʼತೈಕ್ಕುಡಂ ಬ್ರಿಜ್‌ʼ ಮೊಕದ್ದಮೆ: ʼಕಾಂತಾರʼ ಚಲನಚಿತ್ರದ 'ವರಾಹರೂಪಂ' ಹಾಡಿಗೆ ಕೇರಳ ನ್ಯಾಯಾಲಯದ ನಿರ್ಬಂಧ

ತನ್ನ 'ನವರಸಂ' ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದ್ದು ಹಾಡಿಗೆ ತಡೆ ನೀಡುವಂತೆ ಕೋರಿ ʼತೈಕ್ಕುಡಂ ಬ್ರಿಜ್‌ʼಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರಿಕ್ಕೋಡ್ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಈ ಆದೇಶ ನೀಡಿದರು.

Bar & Bench

ಕೇರಳದ ಜನಪ್ರಿಯ ಸಂಗೀತ ತಂಡ ʼತೈಕ್ಕುಡಂ ಬ್ರಿಜ್‌ʼನ ಅನುಮತಿ ಪಡೆಯದೆ ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಸೂಪರ್‌ಹಿಟ್‌ ಚಲನಚಿತ್ರ 'ಕಾಂತಾರ'ದ 'ವರಾಹ ರೂಪಂ' ಹಾಡನ್ನು ಪ್ರದರ್ಶಿಸದಂತೆ ಕೇರಳದ ನ್ಯಾಯಾಲಯವೊಂದು ಶುಕ್ರವಾರ ತಡೆ ನೀಡಿದೆ.

ತಂಡ ಇನ್‌ಸ್ಟಾಗ್ರಾಮ್‌ನಲ್ಲಿ ನೀಡಿರುವ ಹೇಳಿಕೆ ಪ್ರಕಾರ ತನ್ನ 'ನವರಸಂ' ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದ್ದು ಹಾಡಿಗೆ ತಡೆ ನೀಡುವಂತೆ ಕೋರಿ ʼತೈಕ್ಕುಡಂ ಬ್ರಿಜ್‌ʼ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರಿಕ್ಕೋಡ್‌ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಈ ಆದೇಶ ನೀಡಿದರು.

ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕರು ಮಾತ್ರವಲ್ಲದೆ ಆನ್‌ಲೈನ್‌ ಸಿನಿಮಾ ವೇದಿಕೆಗಳಾದ ಅಮೆಜಾನ್‌, ಸ್ಪಾಟಿಫೈ, ಯೂಟ್ಯೂಬ್‌, ವಿಂಕ್‌ ಮ್ಯೂಸಿಕ್‌, ಜಿಯೋಸಾವನ್‌ ಮತ್ತಿತರರು ತಂಡದ ಅನುಮತಿ ಇಲ್ಲದೆ ʼವರಾಹ ರೂಪಂʼ ಹಾಡನ್ನು ಪ್ರದರ್ಶಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಸಂಗೀತ ತಂಡದ ಇನ್‌ಸ್ಟಾಗ್ರಾಂ ಪೋಸ್ಟ್‌ ತಿಳಿಸಿದೆ.

ಸೆಪ್ಟೆಂಬರ್ 30, 2022ರಂದು ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿನಯದ ಬ್ಲಾಕ್‌ಬಸ್ಟರ್ ಕನ್ನಡ ಚಲನಚಿತ್ರ ಕಾಂತಾರ ಮತ್ತು ಅದರ ಸಂಗೀತ ಸಂಯೋಜಕ ಬಿ ಅಜನೀಶ್ ಲೋಕನಾಥ್ ಅನತಿ ಕಾಲದಲ್ಲಿಯೇ 'ವರಾಹ ರೂಪಂ' ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪ ಎದುರಿಸಿದರು.

ಐದು ವರ್ಷಗಳ ಹಿಂದೆ ಬಿಡುಗಡೆಯಾದ 'ನವರಸಂ' ಎಂಬ ಹಾಡನ್ನು ʼವರಾಹ ರೂಪಂʼ ಗೀತೆ ಹೋಲುತ್ತದೆ ಎಂದು ಆರೋಪಿಸಿದ ʼತೈಕ್ಕುಡಂ ಬ್ರಿಜ್‌ʼ ಕೂಡಲೇ ಸಾಮಾಜಿಕ ಜಾಲತಾಣಗಳ ಮೂಲಕ ತನಗೂ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿತು.

ನಮ್ಮ ನವರಸಂ ಮತ್ತು ವರಾಹ ರೂಪಂ ಆಡಿಯೋ ವಿಚಾರದಲ್ಲಿ ಅನೇಕ ಅನಿವಾರ್ಯ ಹೋಲಿಕೆಗಳು ಇದ್ದುದರಿಂದ ಹಕ್ಕುಸ್ವಾಮ್ಯ ಕಾಯಿದೆಯ ಘೋರ ಉಲ್ಲಂಘನೆಯಾಗಿದೆ. ನಮ್ಮ ದೃಷ್ಟಿಯಲ್ಲಿ ಸ್ಫೂರ್ತಿ ಮತ್ತು ಕೃತಿಚೌರ್ಯಕ್ಕೂ ನಡುವಿನ ಗೆರೆ ಭಿನ್ನ ಮತ್ತು ನಿರ್ವಿವಾದಿತವಾಗಿದ್ದು ಇದಕ್ಕೆ ಕಾರಣರಾದ ಸಿನಿಮಾ ತಂಡದ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರುತ್ತೇವೆ. ಹಾಡನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಜೊತೆಗೆೆ ಸಿನಿಮಾದ ಸೃಜನಶೀಲ ತಂಡ ತನ್ನದೇ ಮೂಲ ಕೃತಿ ಎಂಬಂತೆ ಹಾಡನ್ನು ಬಿಡುಗಡೆ ಮಾಡಿದೆ ಎಂದು ಬ್ರಿಜ್‌ನ ಇನ್‌ಸ್ಟಾಗ್ರಾಂ ಪೋಸ್ಟ್‌ ವಿವರಿಸಿತ್ತು.

ಐದು ವರ್ಷಗಳ ಹಿಂದೆ ಮಾತೃಭೂಮಿ ಕಪ್ಪಾ ಟಿವಿಯ ಯುಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾದ ʼನವರಸಂʼ ಗೀತೆಯನ್ನು ಈವರೆಗೆ ಸುಮಾರು 53 ಲಕ್ಷ ಬಾರಿ ವೀಕ್ಷಿಸಲಾಗಿದೆ. ಕಳೆದ 9 ದಿನಗಳ ಹಿಂದೆ ʼಹೊಂಬಾಳೆ ಫಿಲಂಸ್‌ʼನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ʼವರಾಹ ರೂಪಂʼ ಈಗಾಗಲೇ 1.7 ಕೋಟಿ ವೀಕ್ಷಣೆ ಪಡೆದಿದೆ. ʼತೈಕ್ಕುಡಂ ಬ್ರಿಜ್‌ʼ ಪರ ವಕೀಲ ಸತೀಶ್ ಮೂರ್ತಿ ವಾದ ಮಂಡಿಸಿದ್ದರು.