ಮರಣದಂಡನೆ 
ಸುದ್ದಿಗಳು

ಬಿಜೆಪಿ ಮುಖಂಡನ ಕೊಲೆ ಪ್ರಕರಣ: ಪಿಎಫ್ಐ-ಎಸ್‌ಡಿಪಿಐಗೆ ಸೇರಿದ 15 ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಿದ ಕೇರಳ ನ್ಯಾಯಾಲಯ

ಡಿಸೆಂಬರ್ 19, 2021 ರಂದು ಅಲಪ್ಪುಳ ಪುರಸಭೆಯ ವೆಲ್ಲಾಕಿನಾರ್‌ನಲ್ಲಿರುವ ಮನೆಯಲ್ಲಿ ತಾಯಿ ಮತ್ತು ಹೆಂಡತಿಯೆದುರು ರಂಜಿತ್‌ರನ್ನು ಕೊಲೆ ಮಾಡಲಾಗಿತ್ತು.

Bar & Bench

ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಅಪರಾಧಿಗಳಿಗೆ ಕೇರಳದ ಅಲಪ್ಪುಳ ಜಿಲ್ಲಾ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿದೆ.

ಆರೋಪಿಗಳಾದ ನೈಸಮ್, ಅಜ್ಮಲ್, ಅನೂಪ್, ಮೊಹಮ್ಮದ್ ಅಸ್ಲಂ, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಅಬ್ದುಲ್ ಕಲಾಂ, ಸಫರುದ್ದೀನ್, ಮನ್ಶಾದ್‌, ಜಸೀಬ್ ರಾಜಾ, ನವಾಜ್‌, ಸಮೀರ್, ನಜೀರ್, ಜಾಕೀರ್ ಹುಸೇನ್, ಶಾಜಿ ಪೂವತುಂಗಲ್ ಹಾಗೂ ಶೆರ್ನಾಸ್ ಅಶ್ರಫ್ ಅವರನ್ನು ಮಾವೆಳೀಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜನವರಿ 20ರಂದು ತಪ್ಪಿತಸ್ಥರೆಂದು ಘೋಷಿಸಿತ್ತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸದಸ್ಯರು ಎಂದು ಹೇಳಲಾದ ಎಲ್ಲಾ ಅಪರಾಧಿಗಳಿಗೆ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿದೆ.

ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು ಸೆಕ್ಷನ್ 149 (ಸಾಮಾನ್ಯ ಉದ್ದೇಶಕ್ಕಾಗಿ ಅಪರಾಧ ಎಸಗಲು ಅಕ್ರಮವಾಗಿ ಗುಂಪುಗೂಡುವುದು) ಅಡಿಯಲ್ಲಿ 12 ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದ್ದರೆ, ಉಳಿದ ಮೂವರು ಆರೋಪಿಗಳನ್ನು ಸೆಕ್ಷನ್ 302 (ಕೊಲೆ) ಮತ್ತು ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದೆ.

ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮತ್ತು ವಕೀಲರಾಗಿದ್ದ ಶ್ರೀನಿವಾಸ್ ಅವರನ್ನು 2021ರ ಡಿಸೆಂಬರ್ 19 ರಂದು ಅಲಪ್ಪುಳ ಪುರಸಭೆಯ ವೆಲ್ಲಾಕಿನಾರ್‌ನಲ್ಲಿರುವ ಅವರ ಮನೆಯಲ್ಲಿ ತಾಯಿ ಮತ್ತು ಪತ್ನಿಯೆದುರೇ ಆರೋಪಿಗಳು ಕೊಲೆ ಮಾಡಿದ್ದರು ಎಂದು ವರದಿಯಾಗಿತ್ತು.

ಈ ಹತ್ಯೆ ನಡೆಯುವ ಹಿಂದಿನ ರಾತ್ರಿ ಅಲಪ್ಪುಳದ ಮನ್ನಂಚೇರಿಯ ಕುಪ್ಪೆಳಂ ಜಂಕ್ಷನ್‌ನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್. ಶಾನ್ ಅವರನ್ನು ಹತ್ಯೆ ಮಾಡಿದ್ದರು ಎನ್ನಲಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಶ್ರೀನಿವಾಸ್‌ ಅವರ ಕೊಲೆ ನಡೆದಿತ್ತು.