ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರಿಗೆ ಋತುಸ್ರಾವದ ರಜೆ ನೀಡಿ ಕೇರಳ ಸರ್ಕಾರವು ಗುರುವಾರ ಆದೇಶ ಮಾಡಿದೆ.
ರಾಜ್ಯ ಉನ್ನತ ಶಿಕ್ಷಣ ಇಲಾಖೆ ಜ.19ರಂದು ಹೊರಡಿಸಿದ ಆದೇಶದಲ್ಲಿ ಪ್ರಸ್ತುತ ವಿಶ್ವವಿದ್ಯಾಲಯದ ನಿಯಮಗಳ ಅಡಿಯಲ್ಲಿ ಸೆಮಿಸ್ಟರ್ ಪರೀಕ್ಷೆಗಳಿಗೆ ಕಡ್ಡಾಯವಾಗಿರುವ ಶೇ.75 ಹಾಜರಾತಿ ಬದಲಿಗೆ ಶೇ.73 ಹಾಜರಾತಿಯೊಂದಿಗೆ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಬಹುದು ಎಂದು ಹೇಳಿದೆ.
ಇದಲ್ಲದೆ, 18 ವರ್ಷ ತುಂಬಿದ ವಿದ್ಯಾರ್ಥಿನಿಯರು 60 ದಿನಗಳ ಗರ್ಭಿಣಿ ರಜೆಯನ್ನು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ನಿಯಮಗಳಲ್ಲಿ ತಿದ್ದುಪಡಿ ಮಾಡಲು ತುರ್ತಾಗಿ ರಾಜ್ಯ ಸರ್ಕಾರವು ಕ್ರಮಕೈಗೊಳ್ಳಲಿದ ಎಂದು ಆದೇಶದಲ್ಲಿ ಹೇಳಲಾಗಿದೆ.
ಮುಟ್ಟಿನ ರಜೆ ಜಾರಿಗೊಳಿಸಿದ ರಾಜ್ಯದ ಪ್ರಥಮ ಶಿಕ್ಷಣ ಸಂಸ್ಥೆ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಸಿಯುಎಸ್‌ಎಟಿ) ಎಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಆರ್ ಬಿಂದು ಜನವರಿ 16ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಪ್ರಸ್ತುತ ಸರ್ಕಾರ ಹೊರಡಿಸಿರುವ ಋತುಸ್ರಾವದ ರಜೆಯ ಆದೇಶದ ರೀತಿಯದ್ದೇ ಸ್ವರೂಪದ ರಜಾ ನೀತಿಯನ್ನು ಸಿಯುಎಸ್‌ಎಟಿ ಇತ್ತೀಚೆಗೆ ಪ್ರಕಟಿಸಿತ್ತು.
ರಾಜ್ಯದಾದ್ಯಂತ ಇರುವ ವಿಶ್ವವಿದ್ಯಾಲಯಗಳಲ್ಲಿ ಇದೇ ರೀತಿಯ ರಜಾ ನೀತಿ ಜಾರಿಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸೋಮವಾರ ಸಚಿವರು ಪೋಸ್ಟ್ ಮಾಡಿದ್ದರು.
ದೇಶಕ್ಕೆ ರಾಜ್ಯ ಸರ್ಕಾರವು ಮತ್ತೊಮ್ಮೆ ಮಾದರಿ ಹಾಕಿಕೊಡುತ್ತಿದ್ದು, ಹಾಲಿ ನಿರ್ಧಾರವು ಎಡರಂಗ ನೇತೃತ್ವದ ಸರ್ಕಾರವು ಲಿಂಗ ಸಮಾನ ಸಮಾಜ ಸೃಷ್ಟಿಸುವ ನಿಟ್ಟಿನಲ್ಲಿ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಟ್ವೀಟ್ ಮಾಡಿದ್ದರು.
ವಿದ್ಯಾರ್ಥಿನಿಯರು ಮತ್ತು ಕೆಲಸ ಮಾಡುತ್ತಿರುವ ಮಕ್ಕಳಿಗೆ ಋತುಸ್ರಾವದ ರಜೆ ಘೋಷಿಸಲು ಕೋರಿ ಈಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.