Assault by Bhagyalakshmi, Diya Sana, Sreelakshmi Arackal on YouTuber Vijay P. Nair 
ಸುದ್ದಿಗಳು

[ಯೂಟ್ಯೂಬರ್‌ ಮೇಲೆ ಹಲ್ಲೆ] ಡಬ್ಬಿಂಗ್‌ ಕಲಾವಿದೆ ಭಾಗ್ಯಲಕ್ಷ್ಮಿ, ದಿಯಾ, ಶ್ರೀಲಕ್ಷ್ಮಿಗೆ ನಿರೀಕ್ಷಣಾ ಜಾಮೀನು ಮಂಜೂರು

ಸ್ತ್ರೀವಾದಿಗಳ ವಿರುದ್ಧ‌ ವಿಡಿಯೋದಲ್ಲಿ ನಿಂದನಾತ್ಮಕ ಪ್ರತಿಕ್ರಿಯೆ ದಾಖಲಿಸಿದ್ದಾರೆ ಎಂದು ಆರೋಪಿಸಿ ಯೂಟ್ಯೂಬರ್ ವಿಜಯ್‌ ನಾಯರ್ ಮೇಲೆ ಹಲ್ಲೆ ನಡೆಸಿದ್ದಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮೂವರು ಮಹಿಳೆಯರು ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Bar & Bench

ವಿವಾದಾತ್ಮಕ ಯೂಟ್ಯೂಬರ್‌ ವಿಜಯ್‌ ಪಿ ನಾಯರ್‌ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಮಲೆಯಾಳಂ ಚಿತ್ರರಂಗದ ಡಬ್ಬಿಂಗ್‌ ಕಲಾವಿದೆ ಭಾಗ್ಯಲಕ್ಷ್ಮಿ, ಸಜ್ನಾ ಎನ್‌ ಎಸ್‌ (ದಿವ್ಯಾ ಸನಾ) ಮತ್ತು ಶ್ರೀಲಕ್ಷ್ಮಿ ಅರಾಕಲ್‌ ಅವರಿಗೆ ಕೇರಳ ಹೈಕೋರ್ಟ್‌ ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ (ಭಾಗ್ಯಲಕ್ಷ್ಮಿ ಕೆ ವರ್ಸಸ್‌ ಕೇರಳ ರಾಜ್ಯ). ಈ ಸಂಬಂಧ ನ್ಯಾಯಮೂರ್ತಿ ಅಶೋಕ್‌ ಮೆನನ್‌ ಅವರಿದ್ದ ಪೀಠವು ಆದೇಶ ಹೊರಡಿಸಿದೆ.

ತಮ್ಮ ಯೂಟ್ಯೂಬ್‌ ವಿಡಿಯೋಗಳಲ್ಲಿ ವಿಜಯ್‌ ಪಿ ನಾಯರ್‌ ಅವರು ಸಾಮಾನ್ಯವಾಗಿ ಸ್ತ್ರೀವಾದಿಗಳ ವಿರುದ್ದ ನಿಂದನಾತ್ಮಕ ಹೇಳಿಕೆ ನೀಡುವುದನ್ನು ಮಾಡುತ್ತಿದ್ದರು. ಮಹಿಳೆಯೊಬ್ಬರ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ ಸೆಪ್ಟೆಂಬರ್‌ 26ರಂದು ನಾಯರ್‌ ಕಚೇರಿಗೆ ತೆರಳಿದ್ದ ಈ ಮೂವರು ಮಹಿಳೆಯರು ಅವರ ಮುಖಕ್ಕೆ ಕಪ್ಪು ಶಾಹಿ ಮತ್ತು ತುರುಚೆ ಎಣ್ಣೆ ಎರಚಿದ್ದರು.

ನಾಯರ್‌ ಮೇಲಿನ ಹಲ್ಲೆಯನ್ನು ಫೇಸ್‌ಬುಕ್ ನಲ್ಲಿ‌ ಲೈವ್ ಮಾಡಲಾಗಿತ್ತಲ್ಲದೇ ಅವರ ಫೋನ್‌ ಮತ್ತು ಲ್ಯಾಪ್‌ಟಾಪ್‌ ಅನ್ನು ಮಹಿಳೆಯರು ಜೊತೆಗೆ ಒಯ್ದಿದ್ದರು. ‌

ಹಲ್ಲೆಯ ಬೆನ್ನಿಗೇ ಭಾಗ್ಯಲಕ್ಷ್ಮಿ, ದಿಯಾ ಸನಾ ಮತ್ತು ಶ್ರೀಲಕ್ಷ್ಮೀ ಅರಾಕಲ್‌ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ಗಳಾದ 452 (ತೊಂದರೆ, ಹಲ್ಲೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡು ಮನೆ ಅತಿಕ್ರಮಿಸುವುದು), 294 B (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಅಂಶಗಳಿರುವ ಪದ ಅಥವಾ ಗೀತೆ ಹಾಡುವುದು), 323 (ಉದ್ದೇಶಪೂರ್ವಕವಾಗಿ ತೊಂದರೆ ನೀಡುವುದಕ್ಕೆ ಶಿಕ್ಷೆ), 506 (ಕ್ರಿಮಿನಲ್‌ ಬೆದರಿಕೆ), 392 (ದರೋಡೆಗೆ ಶಿಕ್ಷೆ), 34 (ಒಂದೇ ಉದ್ದೇಶಕ್ಕಾಗಿ ಹಲವರು ಸೇರುವುದು) ಅಡಿ ದೂರು ದಾಖಲಿಸಲಾಗಿತ್ತು.

ನಾಯರ್‌ ಅವರ ನಿಂದನಾತ್ಮಕ ವಿಡಿಯೋದ ಕುರಿತು ಪೊಲೀಸರು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ತಾವೇ ಕ್ರಮವಹಿಸಬೇಕಾಯಿತು ಎಂದು ಆರೋಪಿಗಳು ನ್ಯಾಯಾಲಯಕ್ಕೆ ವಿವರಿಸಿದರು. ಅಕ್ರಮವಾಗಿ ಕಾನೂನನ್ನು ಕೈಗೆತ್ತಿಕೊಂಡಿರುವ ಆರೋಪಿ ಮಹಿಳೆಯರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ನಾಯರ್ ಪರ ವಕೀಲರು ವಾದಿಸಿದ್ದರು‌.