Kerala High court, Pregnant woman
Kerala High court, Pregnant woman 
ಸುದ್ದಿಗಳು

ಸಹೋದರನಿಂದ ಗರ್ಭವತಿ: ಅಪ್ರಾಪ್ತೆಯ ಗರ್ಭಪಾತಕ್ಕೆ ಅನುಮತಿಸಿದ ಕೇರಳ ಹೈಕೋರ್ಟ್

Bar & Bench

ತನ್ನ ಸಹೋದರನಿಂದ ಗರ್ಭಧರಿಸಿದ 15 ವರ್ಷದ ಬಾಲಕಿಯ 7 ತಿಂಗಳ ಭ್ರೂಣದ ವೈದ್ಯಕೀಯ ಗರ್ಭಪಾತಕ್ಕೆ ಕೇರಳ ಹೈಕೋರ್ಟ್‌ ಇತ್ತೀಚೆಗೆ ಅನುಮತಿ ನೀಡಿದೆ [ಎಕ್ಸ್‌ಎಕ್ಸ್‌ಎಕ್ಸ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ವೈದ್ಯಕೀಯ ಮಂಡಳಿ ಸಲ್ಲಿಸಿದ ವರದಿ ಪರಿಗಣಿಸಿದ ನ್ಯಾ. ಜಿಯಾದ್ ರಹಮಾನ್ ಎ ಎ ಅವರು ಗರ್ಭಪಾತಕ್ಕೆ ಅನುಮತಿ ನೀಡದಿದ್ದರೆ ವಿವಿಧ ಸಾಮಾಜಿಕ ಮತ್ತು ವೈದ್ಯಕೀಯ ತೊಡಕುಗಳು ಉದ್ಭವಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

“ವಾಸ್ತವಾಂಶ ಪರಿಗಣಿಸಿ ಮಗು ಒಡಹುಟ್ಟಿದವರಿಬ್ಬರಿಂದಲೇ ಜನಿಸುವುದರಿಂದ ವಿವಿಧ ಸಾಮಾಜಿಕ ಮತ್ತು ವೈದ್ಯಕೀಯ ತೊಡಕುಗಳು ಉದ್ಭವಿಸುವ ಸಾಧ್ಯತೆ ಇದ್ದು ಇಂತಹ ಸಂದರ್ಭಗಳಲ್ಲಿ ಗರ್ಭಾವಸ್ಥೆ ಅಂತ್ಯಗೊಳಿಸುವ ಅರ್ಜಿದಾರರ ಕೋರಿಕೆಗೆ ಅನುಮತಿ ನೀಡುವುದು ಅನಿವಾರ್ಯವಾಗುತ್ತದೆ. ಆದಾಗ್ಯೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸಿದ ಹೊರತಾಗಿಯೂ ವೈದ್ಯಕೀಯ ಮಂಡಳಿ ಒತ್ತಿ ಹೇಳಿರುವಂತೆ ಜೀವಂತ ಮಗುವಿಗೆ ಜನ್ಮ ನೀಡುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಅಂತಹ ಸಂದರ್ಭಗಳಲ್ಲಿ ಅರ್ಜಿದಾರರ ಮಗಳ ಗರ್ಭಾವಸ್ಥೆಯ ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಲು ನಾನು ಒಲವು ತೋರುತ್ತೇನೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವೈದ್ಯಕೀಯವಾಗಿ ಗರ್ಭಾವಸ್ಥೆ ಅಂತ್ಯಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಅಪ್ರಾಪ್ತ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಗರ್ಭಾವಸ್ಥೆ ಮುಂದುವರಿಸುವುದು ಹುಡುಗಿಯ ಸಾಮಾಜಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಗಂಭೀರವಾದ ಧಕ್ಕೆ ಉಂಟುಮಾಡುವ ಸಾಧ್ಯತೆಯಿದ್ದು ಹದಿಹರೆಯದ ಗರ್ಭಧಾರಣೆಯ ತೊಡಕುಗಳಿಂದ ಆಕೆಯ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ, ಅಪ್ರಾಪ್ತ ಬಾಲಕಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯಕ್ಕೆ (ಎಂಟಿಪಿ) ಅರ್ಹಳಾಗಿದ್ದಾಳೆ ಎಂದು ವೈದ್ಯಕೀಯ ಮಂಡಳಿ ಅಭಿಪ್ರಾಯಪಟ್ಟಿತ್ತು.

ಹೀಗಾಗಿ ನ್ಯಾಯಾಲಯ ʼಯಾವುದೇ ವಿಳಂಬವಿಲ್ಲದೆ ಬಾಲಕಿಯ ಗರ್ಭಧಾರಣೆ ಅಂತ್ಯಗೊಳಿಸಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಧೀಕ್ಷಕರಿಗೆ ಸೂಚಿಸಿತು.