Boby Chemmanur, Kerala HC 
ಸುದ್ದಿಗಳು

ಲೈಂಗಿಕ ಕಿರುಕುಳ ಪ್ರಕರಣ: ಚೆಮ್ಮನೂರ್ ಜ್ಯೂಯಲರ್ಸ್ ಮಾಲೀಕ ಬಾಬಿಗೆ ಕೇರಳ ಹೈಕೋರ್ಟ್ ಜಾಮೀನು

ಇದೇ ವೇಳೆ ಮಲಯಾಳಂ ನಟಿಯನ್ನು ಉದ್ದೇಶಿಸಿ ಬಾಬಿ ಅವರು ನೀಡಿದ ಹೇಳಿಕೆಯನ್ನು ನ್ಯಾಯಮೂರ್ತಿಗಳು ಟೀಕಿಸಿದರು.

Bar & Bench

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತನ್ನ ವಿರುದ್ಧ ಲೈಂಗಿಕ ಛಾಯೆಯ ಕೊಂಕು ಮಾತಿನ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಲಯಾಳಂ ನಟಿಯೊಬ್ಬರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಬಾಬಿ ಚೆಮ್ಮನೂರ್ ಅವರಿಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ [ ಸಿಡಿ ಬಾಬಿ ಅಲಿಯಾಸ್‌ ಡಾ. ಬಾಬಿ ಚೆಮ್ಮನೂರ್‌ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಕೆಲ ಷರತ್ತುಗಳಿಗೆ ಒಳಪಟ್ಟು ಜಾಮೀನು ನೀಡಲಾಗುವುದು. ಮಧ್ಯಾಹ್ನ 3.30ರ ಸುಮಾರಿಗೆ ವಿವರವಾದ ಆದೇಶವನ್ನು ಪ್ರಕಟಿಸಲಾಗುವುದು ಎಂದು ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಹೇಳಿದರು.

ಆದರೆ ಮಲಯಾಳಂ ನಟಿಯನ್ನು ಉದ್ದೇಶಿಸಿ ಬಾಬಿ ಅವರು ನೀಡಿದ ಹೇಳಿಕೆಯನ್ನು ಟೀಕಿಸಿದ ನ್ಯಾಯಮೂರ್ತಿಗಳು ನಟಿಯನ್ನು ಕುಂತಿದೇವಿಗೆ ಹೋಲಿಸಿರುವುದು ದ್ವಂದ್ವಾರ್ಥದಿಂದ ಕೂಡಿದೆ ಎಂದು ಹೇಳಿದರು. ಅಲ್ಲದೆ, ವಿಚಾರಣಾರ್ಹತೆಯ ಮೇಲೆ ವಾದ ಮಂಡಿಸಿದರೆ ಜಾಮೀನು ನೀಡುವುದಕ್ಕೆ ಒಪ್ಪುವುದಿಲ್ಲ ಎಂತಲೂ ಅದು ಇದೇ ವೇಳೆ ತಿಳಿಸಿತು.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಚೆಮ್ಮನೂರ್ ಅವರ ನಡವಳಿಕೆಗೆ ನಟಿ ತಕ್ಷಣ ಪ್ರತಿಕ್ರಿಯಿಸದಿರುವುದು ಅವರ ಸಂಯಮವನ್ನು ಸೂಚಿಸುತ್ತದೆ ಎಂದು ನ್ಯಾಯಾಧೀಶರು ಹೇಳಿದರು. “ಕಾರ್ಯಕ್ರಮದಲ್ಲಿ (ಆಭರಣ ಮಳಿಗೆ ಉದ್ಘಾಟನೆ ಕಾರ್ಯಕ್ರಮ) ಆಕೆ ಏನನ್ನೂ ಹೇಳದಿರುವುದು ಆಕೆಯ ಸಭ್ಯತೆಯನ್ನು ತೋರಿಸುತ್ತದೆ" ಎಂದು ಅವರು ಹೇಳಿದರು.

ಬಾಬಿ ಒಡೆತನದ ಮಳಿಗೆ ಉದ್ಘಾಟನಾ ಸಮಾರಂಭದದಲ್ಲಿ ನಡೆದ ವೈಯಕ್ತಿಕ ಸಂವಾದದ ವೇಳೆ ಬಾಬಿ ಚೆಮ್ಮನೂರ್ ಅವರು ಅನುಚಿತ ಹೇಳಿಕೆ ನೀಡಿದ್ದರು ಎಂದು ಮಲಯಾಳಂ ನಟಿ ದೂರಿದ್ದರು. ತಮ್ಮ ಬಗ್ಗೆ ಉಳಿದವರು ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್‌ ವೇದಿಕಗಳಲ್ಲಿ ಲೈಂಗಿಕವಾಗಿ ಅನುಚಿತ ಹೇಳಿಕೆಗಳನ್ನು ನೀಡಲು ಬಾಬಿ ಅವರ ಹೇಳಿಕೆ  ಪ್ರೇರೇಪಿಸಿದೆ ಎಂದಿದ್ದರು.

ದೂರು ನೀಡುವ ಮುನ್ನ ಸಾರ್ವಜನಿಕವಾಗಿ ಎಚ್ಚರಿಕೆ ನೀಡಿದ್ದ ನಟಿ ಕಿರುಕುಳವನ್ನು ಖಂಡಿಸಿದ್ದರು. ತನ್ನ ವಿರುದ್ಧ ನಿಂದನೀಯವಾಗಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿದ್ದರು.

ಬಾಬಿ ಅವರನ್ನು ಜನವರಿ 8ರಂದು ವಯನಾಡ್‌ನಲ್ಲಿ ಬಂಧಿಸಲಾಗಿತ್ತು. ಬಿಎನ್‌ಎಸ್‌ ಕಾಯಿದೆಯ ಸೆಕ್ಷನ್ 75 (1) (i) (ದೈಹಿಕ ಸಂಪರ್ಕ ಮತ್ತು ಅನಪೇಕ್ಷಿತ ಹಾಗೂ ಲೈಂಗಿಕ ಪ್ರಲೋಭನೆಗಳನ್ನು ಒಳಗೊಂಡ ಕ್ರಿಯೆ) 75 (1) (iv) (ಲೈಂಗಿಕ ಕಿರುಕುಳದ ಒಂದು ರೂಪವಾಗಿ ಲೈಂಗಿಕ ಛಾಯೆಯ ಹೇಳಿಕೆ ನೀಡುವುದು) ಹಾಗೂ ಐಟಿ ಸೆಕ್ಷನ್‌ 67ರ ಅಡಿ (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಸ್ತುವಿಷಯ ಪ್ರಕಟಿಸುವುದು ಇಲ್ಲವೇ ಹಂಚಿಕೊಳ್ಳುವುದು) ಅವರ ವಿರುದ್ಧ  ಪ್ರಕರಣ ದಾಖಲಿಸಲಾಗಿತ್ತು. ಜಾಮೀನು ಕೋರಿ ಬಾಬಿ ಅವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮೊರೆ ಹೋಗಿದ್ದರು.

ಜನವರಿ 9 ರಂದು, ಚೆಮ್ಮನೂರ್ ಅವರ ಜಾಮೀನು ಅರ್ಜಿಯನ್ನು ಎರ್ನಾಕುಲಂನ ಜೆಎಫ್‌ಸಿಎಂ-II ನ್ಯಾಯಾಲಯ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಬಾಬಿ  ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಬಾಬಿ ಹೈಕೋರ್ಟ್‌ ಮೊರೆ ಹೋಗಿದ್ದರು.