blank cheque, Kerala High Court
blank cheque, Kerala High Court 
ಸುದ್ದಿಗಳು

ಪುರಾವೆಗಳಿಲ್ಲದಿದ್ದಾಗ ಸಾಲದ ಪಾವತಿಗಾಗಿಯೇ ಖಾಲಿ ಚೆಕ್ ನೀಡಲಾಗಿದೆ ಎಂದು ಭಾವಿಸಲಾಗುತ್ತದೆ: ಕೇರಳ ಹೈಕೋರ್ಟ್

Bar & Bench

ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಕಾಯಿದೆಯ ಸೆಕ್ಷನ್ 139ರ ಅಡಿಯಲ್ಲಿ ಸಾಲದ ಋಣಭಾರ ಅಥವಾ ಹೊಣೆಗಾರಿಕೆಯಿಂದ ಬಿಡುಗಡೆ ಮಾಡುವುದಕ್ಕಾಗಿ ಚೆಕ್ ನೀಡಲಾಗಿದೆ ಎಂಬ ಊಹೆಯು ಸ್ವಯಂಪ್ರೇರಣೆಯಿಂದ ನೀಡಲಾದ ಖಾಲಿ ಚೆಕ್‌ನ ಸಂದರ್ಭದಲ್ಲಿಯೂ ಅನ್ವಯವಾಗುತ್ತದೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಪಿಕೆ ಉತ್ತುಪ್ಪು ಮತ್ತು ಎನ್‌ಜೆ ವರ್ಗೀಸ್ ನಡುವಣ ಪ್ರಕರಣ].

ಬೀರ್ ಸಿಂಗ್ ಮತ್ತು ಮುಖೇಶ್ ಕುಮಾರ್ ನಡುವಣ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ನ್ಯಾ. ಸೋಫಿ ಥಾಮಸ್‌ ಅವರಿದ್ದ ಪೀಠ ಉಲ್ಲೇಖಿಸಿತು. ಸಾಬೀತುಪಡಿಸಲು ಪುರಾವೆಗಳಿಲ್ಲದಿದ್ದಾಗ ಸ್ವಪ್ರೇರಣೆಯಿಂದ ಸಹಿ ಮಾಡಿದ ಖಾಲಿ ಚೆಕ್ ಕೂಡ ಎನ್‌ಐ ಕಾಯಿದೆಯ ಸೆಕ್ಷನ್ 139ರ ಅಡಿ ಊಹೆಗೆ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ಹೇಳುತ್ತದೆ.

“ಖಾಲಿ ಚೆಕ್ ಹಾಳೆಯನ್ನು ಆರೋಪಿ ಸ್ವಯಂಪ್ರೇರಣೆಯಿಂದ ಸಹಿ ಮಾಡಿ ನೀಡಿದ್ದರೂ ಸಹ, ಸಾಲದಿಂದ ಮುಕ್ತವಾಗುವುದಕ್ಕಾಗಿ ಕೆಲವು ಪಾವತಿಗೆ, ಚೆಕ್ ನೀಡಲಾಗಿಲ್ಲ ಎಂದು ತೋರಿಸಲು ವಿಶ್ವಾಸಾರ್ಹತೆ ಇಲ್ಲದಿದ್ದಾಗ ಎನ್ ಐ ಕಾಯಿದೆಯ ಸೆಕ್ಷನ್ 139ರ ಅಡಿಯಲ್ಲಿ ಅದು ಊಹೆಗೆ ಕಾರಣವಾಗುತ್ತದೆ" ಎಂದು ಬೀರ್ ಸಿಂಗ್ ತೀರ್ಪನ್ನು ಉಲ್ಲೇಖಿಸಿ ಹೈಕೋರ್ಟ್ ಹೇಳಿದೆ.

ಚೆಕ್ ಬೌನ್ಸ್‌ನ ಅಪರಾಧಕ್ಕೆ ಸಂಬಂಧಿಸಿದಂತೆ ಎನ್‌ಐ ಕಾಯಿದೆಯ ಸೆಕ್ಷನ್ 138ರ ಅಡಿಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.

ಮರುಪರಿಶೀಲನಾ ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣವಿದೆ ಎಂದು ಖಚಿತಪಡಿಸಿಕೊಳ್ಳದೆ ಚೆಕ್ ನೀಡಿದ್ದರು,  ಆ ಮೂಲಕ ₹ 4 ಲಕ್ಷ ಸಾಲ ಮರುಪಾವತಿಸಿರಲಿಲ್ಲ ಎಂದು ಆರೋಪಿಸಲಾಗಿತ್ತು.

ಆರೋಪಿ-ಅರ್ಜಿದಾರರನ್ನು ವಿಚಾರಣಾ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿತ್ತು. ಮೇಲ್ಮನವಿ ನ್ಯಾಯಾಲಯ ಶಿಕ್ಷೆಯನ್ನು ಎತ್ತಿಹಿಡಿದರೂ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿತ್ತು.

ವಾಹನ ಸಾಲಕ್ಕೆ ಭದ್ರತೆಯಾಗಿ ದೂರುದಾರರ ಹಣಕಾಸು ಸಂಸ್ಥೆಗೆ ಖಾಲಿ ಚೆಕ್ಕನ್ನೇ ನೀಡಿದ್ದೇನೆ ಎಂದು ಮರುಪರಿಶೀಲನಾ ಅರ್ಜಿದಾರರು ಹೇಳಿದ್ದರು.

ನಂತರ ಖಾಲಿ ಚೆಕ್ ಸೇರಿದಂತೆ ವಿವಿಧ ದಾಖಲೆಗಳನ್ನು ತಮಗೆ ಹಿಂದಿರುಗಿಸಲು ದೂರುದಾರರು ವಿಫಲರಾಗಿದ್ದಾರೆ ಎಂದು ಮರುಪರಿಶೀಲನಾ ಅರ್ಜಿದಾರ ವಾದಿಸಿದ್ದರು. ಖಾಲಿ ಚೆಕ್ ಅನ್ನು ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಅವರ ದೂರಾಗಿತ್ತು.

ಆದರೆ, ಈ ವಾದಗಳನ್ನು ಹೈಕೋರ್ಟ್ ತಳ್ಳಿ ಹಾಕಿದೆ. ದೂರುದಾರರು ನಡೆಸುತ್ತಿರುವ ಹಣಕಾಸು ಸಂಸ್ಥೆಯಿಂದ ವಾಹನ ಖರೀದಿಗೆ ಸಾಲ ಪಡೆದಿರುವುದನ್ನು ತೋರಿಸಲು ಯಾವುದೇ ದಾಖಲೆ ಸಲ್ಲಿಸಲು ಅರ್ಜಿದಾರರು ವಿಫಲರಾಗಿದ್ದಾರೆ. ಮತ್ತೊಂದೆಡೆ, ದೂರುದಾರರು ಹೇಳಿಕೊಂಡಂತೆ ಅವರು ₹ 4 ಲಕ್ಷ ವೈಯಕ್ತಿಕ ಸಾಲ ಪಡೆದಿದ್ದಾರೆ ಎಂದು ಸೂಚಿಸಲು ಪುರಾವೆಗಳಿವೆ ಎಂದು ಅದು ಹೇಳಿದೆ.

ಮರುಪರಿಶೀಲನಾ ಅರ್ಜಿದಾರರು ಸ್ವಯಂಪ್ರೇರಣೆಯಿಂದ ದೂರುದಾರರಿಗೆ ಸಹಿ ಮಾಡಿದ ಚೆಕ್ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ ಆದ್ದರಿಂದ, ಎನ್‌ಐ ಕಾಯಿದೆಯ ಸೆಕ್ಷನ್ 139ರ ಅಡಿಯಲ್ಲಿ ಊಹೆಯು ದೂರುದಾರರಿಗೆ ಅನುಕೂಲಕರವಾಗಿದೆ. ತಮ್ಮ ಸಾಲ ಪಾವತಿಸಲು ಚೆಕ್ ನೀಡಿದ್ದಾರೆ ಎಂಬ ಊಹೆಯನ್ನು ಮರುಪರಿಶೀಲನಾ ಅರ್ಜಿದಾರರು ಎದುರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಆದ್ದರಿಂದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌ ಶಿಕ್ಷೆ ಅನುಭವಿಸಲು ಮತ್ತು ದಂಡ ಪಾವತಿಸಲು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಮರುಪರಿಶೀಲನಾ ಅರ್ಜಿದಾರರಿಗೆ ಸೂಚಿಸಿತು.