Kerala High Court
Kerala High Court 
ಸುದ್ದಿಗಳು

ಪಕ್ಷಾಂತರಿಗಳಿಗೆ ದಂಡ ವಿಧಿಸಿ, ಪಕ್ಷಾಂತರ ವಿರೋಧಿ ಕಾಯಿದೆಯಲ್ಲಿ ಬದಲಾವಣೆ ತನ್ನಿ: ಕೇರಳ ಹೈಕೋರ್ಟ್ ಕರೆ

Bar & Bench

ಪಕ್ಷಾಂತರ ವಿರೋಧಿ ಕಾನೂನುಗಳಿದ್ದರೂ ಪಕ್ಷಾಂತರ ಹೆಚ್ಚುತ್ತಿರುವುದನ್ನು ಗಮನಿಸಿರುವ ಕೇರಳ ಹೈಕೋರ್ಟ್‌ ಪಕ್ಷಾಂತರಿಗಳಿಗೆ ಆರ್ಥಿಕ ದಂಡ ವಿಧಿಸುವ ಕಾಯಿದೆ ಜಾರಿಗೊಳಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿತು [ದೀಪಕ್ ಕೆ ಕೇರಳ ಕೇರಳ ರಾಜ್ಯ ಚುನಾವಣಾ ಆಯೋಗ ಇನ್ನಿತರರ ನಡುವಣ ಪ್ರಕರಣ].

ಪ್ರಜಾಪ್ರಭುತ್ವಕ್ಕೆ ಪಕ್ಷಾಂತರ ಅಡ್ಡಿಯಾಗಿದ್ದು ಪಕ್ಷಾಂತರ ವಿರೋಧಿ ಕಾನೂನುಗಳು ಅದನ್ನು ತಡೆಯುತ್ತಿಲ್ಲ ಎಂದು ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಹೇಳಿದರು.

“ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಿದ ಪಕ್ಷಕ್ಕೆ ಮಾತ್ರವಲ್ಲದೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಜನರ ಇಚ್ಛೆಗೂ ಪಕ್ಷಾಂತರ ದ್ರೋಹ ಎಸಗುತ್ತದೆ… ಚುನಾವಣೆ ನಂತರ ಪಕ್ಷ ಬದಲಿಸಿದರೂ ತಾಂತ್ರಿಕತೆಯ ನೆಪದಲ್ಲಿ ಪಕ್ಷಾಂತರ ವಿರೋಧಿ ಕಾನೂನಿನ ಕುಣಿಕೆಯಿಂದ ಹೊರಬಂದು ಜಾರಿಗೊಂಡ ಆ ಕಾಯಿದೆಯ ದಕ್ಷತೆಯನ್ನು ಕುಗ್ಗಿಸಲಾಗುತ್ತಿದೆ. ಅಂತಹ ಪ್ರಯತ್ನಗಳು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ. ಪಕ್ಷಾಂತರ ವಿರೋಧಿ ಕಾನೂನಿನ ಹಿಡಿತ ಮೇಲುಗೈ ಸಾಧಿಸುವಂತಾಗಲು ಪಕ್ಷಾಂತರಿಗಳು ಅಳವಡಿಸಿಕೊಂಡಿರುವ ಜಾಣ್ಮೆಯ ವಿಧಾನಗಳ ಕುರಿತು ಕಠೋರ ರೀತಿಯಲ್ಲಿ ವ್ಯವಹರಿಸಬೇಕು ಇಲ್ಲವಾದರಲ್ಲಿ ಕಾಯಿದೆಯ ಉದ್ದೇಶ ನಾಶವಾಗುತ್ತದೆ” ಎಂದು ಪೀಠ ನುಡಿಯಿತು.

ಪಕ್ಷಾಂತರಗೊಂಡ ರಾಜಕಾರಣಿಯನ್ನು ಅನರ್ಹಗೊಳಿಸಲಾಗುತ್ತಾದರೂ ಅವರು ಬೇರಾವುದೇ ಮಹತ್ವದ ಪರಿಣಾಮಗಳನ್ನು ಎದುರಿಸುತ್ತಿಲ್ಲ. ಮತ್ತೊಂದೆಡೆ ಉಪ ಚುನಾವಣೆಗಳು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿವೆ. ಹೀಗಾಗಿ ಪಕ್ಷಾಂತರ ವಿರೋಧಿ ಕಾನೂನಿನಲ್ಲಿ ಆರ್ಥಿಕ ದಂಡ ವಿಧಿಸುವುದನ್ನು ಶಾಸಕಾಂಗ ಪರಿಶೀಲಿಸಬೇಕೆಂದು ನ್ಯಾಯಾಲಯ ಕಿವಿಮಾತು ಹೇಳಿತು.

ಪಕ್ಷಾಂತರವು ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಿದ ಪಕ್ಷಕ್ಕೆ ಮಾತ್ರವಲ್ಲದೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಜನರ ಇಚ್ಛೆಗೂ ದ್ರೋಹ ಎಸಗುತ್ತದೆ
ಕೇರಳ ಹೈಕೋರ್ಟ್

2020ರಲ್ಲಿ ಪರಿಷತ್ತಿಗೆ ಚುನಾಯಿತರಾದ ತೊಡುಪುಳ ಮುನ್ಸಿಪಲ್ ಕೌನ್ಸಿಲ್‌ ಸದಸ್ಯ ಮ್ಯಾಥ್ಯೂ ಜೋಸೆಫ್ ಅವರನ್ನು ಅನರ್ಹಗೊಳಿಸಲು ನಿರಾಕರಿಸಿದ ಕೇರಳ ರಾಜ್ಯ ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿತು.

ಜೋಸೆಫ್‌ ಅವರು ಕೆಪಿಎಂಜೆಜೆ ಪಕ್ಷದಿಂದ ಆಯ್ಕೆಗೊಂಡು ತದನಂತರ ಅದರ ಸದಸ್ಯತ್ವವನ್ನು ಸ್ವಯಂ ಬಿಟ್ಟುಕೊಟ್ಟಿದ್ದರು. ನಂತರ ಕೆಸಿಎಂ ಪಕ್ಷವನ್ನು ಸೇರಿದ್ದರು. ಅವರ ಈ ನಡೆಯು ಅವರನ್ನು ಕೇರಳ ಸ್ಥಳೀಯ ಸಂಸ್ಥೆಗಳ ಕಾಯಿದೆಯ ಸೆಕ್ಷನ್‌ಗಳ ಅಡಿ ಸದಸ್ಯತ್ವ ಅನರ್ಹಗೊಳ್ಳಲು ಕಾರಣವಾಗಬೇಕಿತ್ತು. ಆದರೆ ಕೆಪಿಎಂಜೆಜೆಯು ನೊಂದಾಯಿತ ಪಕ್ಷವಲ್ಲ, ಹೆಚ್ಚೆಂದರೆ ಅದು ಭಿನ್ನರ ಒಂದು ಗುಂಪು ಮಾತ್ರ ಎಂದು ಜೋಸೆಫ್‌ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಆಯ್ಕೆಯನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಆದರೆ, ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿತು.

ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಚುನಾವಣಾ ಆಯೋಗದ ಆದೇಶ ರದ್ದುಗೊಳಿಸಿದ ಅದು ಮ್ಯಾಥ್ಯೂ ಜೋಸೆಫ್ ಅವರನ್ನು ತೊಡುಪುಳ ಪುರಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಘೋಷಿಸಿತು.