ಅಪ್ರಾಪ್ತ ಮಗುವಿನ ಪಾಲನೆಯ ಹೊಣೆಯನ್ನು ತಂದೆಗೆ ಒಪ್ಪಿಸುವ ಆದೇಶ ನೀಡುವ ವೇಳೆ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಬಳಸಿದ ಭಾಷೆ ಕೇರಳ ಹೈಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿದೆ.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಮಗುವಿನ ತಾಯಿಯ ವಿರುದ್ಧ ಅಭಿರುಚಿಹೀನ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಷ್ತಾಕ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠ ಬೇಸರ ವ್ಯಕ್ತಪಡಿಸಿತು.
ನಿರ್ದಿಷ್ಟವಾಗಿ ಹೇಳುವುದಾದರೆ, ತಾಯಿ ತನ್ನ ಸುಖಕ್ಕಾಗಿ ಬೇರೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಿದ್ದು ಆಕೆ ಆಯ್ದುಕೊಂಡ ʼದಾರಿ ತಪ್ಪಿದ ಬದುಕುʼ ಮಕ್ಕಳ ಯೋಗಕ್ಷೇಮಕ್ಕೆ ಧಕ್ಕೆ ತರುತ್ತದೆ ಎನ್ನುವ ತೀರ್ಮಾನಕ್ಕೆ ಕೌಟುಂಬಿಕ ನ್ಯಾಯಾಲಯ ಬಂದಿರುವುದು ಕಂಡುಬಂದಿತ್ತು.
ಕೌಟುಂಬಿಕ ನ್ಯಾಯಾಲಯ ತನ್ನ ಆದೇಶದಲ್ಲಿ ಬಳಸಿರುವ ಭಾಷೆ ಖಂಡನಾರ್ಹವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. "ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಬಳಸಿದ ಭಾಷೆ ನಮ್ಮನ್ನು ವಿಚಲಿತಗೊಳಿಸಿದೆ. ಒಬ್ಬ ಮಹಿಳೆ ಪರ-ಪುರುಷನ ಸಹವಾಸದಲ್ಲಿ ಇದ್ದಳು ಎಂದ ಮಾತ್ರಕ್ಕೆ ಅವಳು ಬೇರೊಬ್ಬರೊಂದಿಗೆ ಇಂದ್ರೀಯ ತೃಪ್ತಿಗಾಗಿ ಹೋದಳು ಎಂಬ ತೀರ್ಮಾನಕ್ಕೆ ಕೌಟುಂಬಿಕ ನ್ಯಾಯಾಲಯ ಬಂದಿದೆ. ಜಿಲ್ಲಾ ನ್ಯಾಯಾಂಗದಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಯ ಮನಸ್ಥಿತಿಯನ್ನು (ಬಳಸಲಾಗಿರುವ) ಅತ್ಯಂತ ಅಭಿರುಚಿಹೀನ ಭಾಷೆ ಬಿಂಬಿಸುತ್ತದೆ" ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಗುವಿನ ತಾಯಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಒಬ್ಬ ಮಹಿಳೆ ಪರ-ಪುರುಷನ ಸಹವಾಸದಲ್ಲಿದ್ದಾಳೆ ಎಂದ ಮಾತ್ರಕ್ಕೆ ಆಕೆ ಅನೈತಿಕ ಸಂಬಂಧ ಹೊಂದಿದ್ದಾಳೆ ಅಥವಾ ಆಕೆ ಕೆಟ್ಟ ತಾಯಿ ಎಂದು ಭಾವಿಸಲಾಗದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
"ಒಬ್ಬರು ವೈವಾಹಿಕ ಗೃಹವನ್ನು (ಗಂಡನ ಮನೆ) ತೊರೆಯಬೇಕಾದ ಸಂದರ್ಭಗಳು ಹಲವು ಇರಬಹುದು. ಒಬ್ಬ ಮಹಿಳೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಂಡುಬಂದರೆ, ಅವಳು ಸುಖಕ್ಕಾಗಿ ಹೋಗಿದ್ದಾಳೆ ಎಂದು ಊಹಿಸುವಂತಿಲ್ಲ. ಅಂತಹ ಆದೇಶಗಳಲ್ಲಿ ಪ್ರತಿಫಲಿಸುವ ನೈತಿಕ ತೀರ್ಮಾನ ಮಕ್ಕಳ ಪಾಲನೆ ಪ್ರಕರಣಗಳ ವಿಚಾರಣೆಯ ಉದ್ದೇಶವನ್ನು ಸೋಲಿಸುತ್ತದೆ" ಎಂದು ಅದು ತಿಳಿಸಿದೆ.
ಮುಂದುವರೆದು ನ್ಯಾಯಾಲಯವು, "ತಾಯಿಯೊಬ್ಬಳು ಸಮಾಜದ ದೃಷ್ಟಿಯಲ್ಲಿ ನೀತಿಗೆಟ್ಟವಳಾಗಿರಬಹುದು, ಆದರೆ ಮಗುವಿನ ಯೋಗಕ್ಷೇಮದ ವಿಚಾರ ಬಂದಾಗ ಆಕೆ ಮಗುವಿಗೆ ಉತ್ತಮ ತಾಯಿಯಾಗಿರಬಹುದು. ಸಾಮಾಜಿಕ ಮೌಲ್ಯ ಮತ್ತು ಆಚರಣೆಗಳಿಂದ ನಿರ್ಮಿತವಾಗಿರುವಂತಹ ನೈತಿಕತೆ ಎನ್ನುವುದು ಮಗು ಹಾಗೂ ಅದರ ಪೋಷಕರ ನಡುವಿನ ಸಾಂದರ್ಭಿಕ ಸಂಬಂಧಗಳನ್ನು ಪ್ರತಿಬಿಂಬಿಸಲೇಬೇಕು ಎಂದೇನೂ ಇಲ್ಲ," ಎಂದು ನ್ಯಾಯಾಲಯ ಹೇಳಿತು.
ಮಕ್ಕಳ ಪಾಲನೆ ವ್ಯಾಜ್ಯಗಳಲ್ಲಿ ನೈತಿಕ ತೀರ್ಮಾನಕ್ಕಿಂತಲೂ ಮಗುವಿನ ಒಳಿತು ನಿರ್ಣಾಯಕ ಅಂಶವಾಗಿರಬೇಕು ಎಂದು ಪೀಠ ಒತ್ತಿಹೇಳಿತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣದಲ್ಲಿ, ಮಗುವಿನ ಹಿತದೃಷ್ಟಿಯಿಂದ ಅದನ್ನು ಪೋಷಕರ ಆವರ್ತಕ ಪಾಲನೆಗೆ ನೀಡುವುದು ಒಳಿತು ಎಂದು ನಿರ್ಧರಿಸಿದ ನ್ಯಾಯಾಲಯ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸಿತು. ವಾರಕ್ಕೊಮ್ಮೆ ಸರದಿಯಂತೆ ಮಗುವಿನ ಪಾಲನೆ ಮಾಡುವಂತೆ ಪೋಷಕರಿಗೆ ಅದು ಸೂಚಿಸಿತು.