ಕೇರಳ ಹೈಕೋರ್ಟ್ ಮತ್ತು ಎಲ್ಜಿಬಿಟಿಕ್ಯೂಐಎ+ ಹೆಮ್ಮೆ 
ಸುದ್ದಿಗಳು

ಎಲ್‌ಜಿಬಿಟಿಕ್ಯೂಐಎ+ ವ್ಯಕ್ತಿಗಳ ವಿರುದ್ಧ ಆನ್‌ಲೈನ್‌ ದಾಳಿ: ಕೇರಳ ಹೈಕೋರ್ಟ್ ಕಳವಳ

Bar & Bench

ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ಸದಸ್ಯರ ಮೇಲೆ ಆನ್‌ಲೈನ್‌ ದಾಳಿ ನಡೆಸುತ್ತಿರುವುದಕ್ಕೆ ಈಚೆಗೆ ಕಳವಳ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್‌ ಅಂತಹ ಸಮುದಾಯಕ್ಕೆ ಸೈಬರ್‌ ಬೆದರಿಕೆಯಿಂದ ರಕ್ಷಣೆ ಒದಗಿಸುವಂತೆ ಸರ್ಕಾರದ ಅಧಿಕಾರಿಗೆಳನ್ನು ಒತ್ತಾಯಿಸಿದೆ.

ಡಿಜಿಟಲ್ ಜಗತ್ತಿನಲ್ಲಿ ಪ್ರಾಮಾಣಿಕತೆ ಮತ್ತು ನ್ಯಾಯವನ್ನು ಕಾಪಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಒತ್ತಿ ಹೇಳಿದರು.

"ಪ್ರತಿಯೊಬ್ಬ ಪ್ರಜೆಗೂ ಸಮಾನವಾಗಿ ಯಾರಿಗೂ ಕಡಿಮೆ ಇಲ್ಲದಂತೆ ಬದುಕುವ ಹಕ್ಕಿದೆ. ಈ ಹಕ್ಕುಗಳನ್ನು ಸಾಂವಿಧಾನಿಕವಾಗಿ ಒದಗಿಸಲಾಗಿದ್ದು ರಕ್ಷಣೆ ನೀಡಲಾಗಿದೆ. ಪ್ರೊಪಗಾಂಡಾ ಕಲ್ಪನೆಗಳು ಅಥವಾ ಹಾನಿಕಾರಕ ತತ್ವ ಅನುಸರಿಸುವ ಯಾವುದೇ ವ್ಯಕ್ತಿ ಅದನ್ನು ಹತ್ತಿಕ್ಕುವಂತಿಲ್ಲ ಇಲ್ಲವೇ ನಿಗ್ರಹಿಸುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ಇಬ್ಬರು ಸದಸ್ಯರು ಮತ್ತು ಲಾಭರಹಿತ ಸಂಸ್ಥೆಯೊಂದು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ದ್ವೇಷ ಭಾಷಣ, ನಕಲಿ ಸುದ್ದಿಗಳನ್ನು ಯೂತ್ ಎನ್‌ರಿಚ್‌ಮೆಂಟ್‌ ಸೊಸೈಟಿ ಹರಡುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ವಿರುದ್ಧ ಅಮಾನವೀಯ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಅದು ನೀಡುತ್ತಿದೆ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಆನ್ ಲೈನ್‌ನಲ್ಲಿ ವ್ಯಕ್ತಿಗಳ ಖ್ಯಾತಿಗೆ ಸುಲಭವಾಗಿ ಹಾನಿ ಉಂಟಾಗಲಿದ್ದು ಅಂತಹ ದಾಳಿ ನಿಗ್ರಹಿಸಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಿ ಹೇಳಿತು.

ನವೆಂಬರ್ 30ರಂದು ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲಯ ಅರ್ಜಿದಾರರು ಈ ಹಿಂದೆ ಸಲ್ಲಿಸಿದ ದೂರುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುವಂತೆ ಸರ್ಕಾರಿ ವಕೀಲರಿಗೆ ಸೂಚನೆ ನೀಡಿತು. ಮುಂದಿನ ವಿಚಾರಣೆ ಮೂರು ವಾರಗಳ ನಂತರ ನಡೆಯಲಿದ್ದು ಅಷ್ಟರೊಳಗೆ ಕ್ರಮ ಕೈಗೊಂಡಿರುವ ಕುರಿತು ವರದಿ ಸಲ್ಲಿಸುವಂತೆ ನ್ಯಾಯಾಲಯ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

xxxx v State of Kerala & Ors..pdf
Preview