Siddique and Kerala High Court  Instagram
ಸುದ್ದಿಗಳು

ಅತ್ಯಾಚಾರ ಪ್ರಕರಣ: ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್

ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿ ಕುರಿತು ನ್ಯಾ. ಕೆ ಹೇಮಾ ಸಮಿತಿ ವರದಿ ಪ್ರಕಟವಾದ ಬಳಿಕ ನಟಿಯೊಬ್ಬರು ಸಿದ್ದಿಕ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು.

Bar & Bench

ಮಲಯಾಳಂ ನಟಿಯೊಬ್ಬರು ದಾಖಲಿಸಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ನೀಡಲು ಕೇರಳ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ನ್ಯಾಯಮೂರ್ತಿ ಸಿ ಎಸ್ ಡಯಾಸ್ ಇಂದು ಬೆಳಗ್ಗೆ ಆದೇಶ ಹೊರಡಿಸಿದರು. ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿ ಕುರಿತು ನ್ಯಾ. ಕೆ ಹೇಮಾ ಸಮಿತಿ ವರದಿ ಪ್ರಕಟವಾದ ಬಳಿಕ ನಟಿಯೊಬ್ಬರು ಸಿದ್ದಿಕ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು.

ವರದಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ, ಪಾತ್ರಕ್ಕಾಗಿ ಪಲ್ಲಂಗ ಹಾಗೂ ಲಿಂಗತಾರತಮ್ಯದ ಮೇಲೆ ಬೆಳಕು ಚೆಲ್ಲಿತ್ತು. ವರದಿ ಪ್ರಕಟಣೆಯ ಹಿನ್ನೆಲೆಯಲ್ಲಿ ಅನೇಕ ನಟರು, ನಿರ್ದೇಶಕರು ಹಾಗೂ ಚಿತ್ರಕರ್ಮಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದವು.

ತಮಿಳು ಚಿತ್ರವೊಂದರಲ್ಲಿ ನಟಿಸಲು ಸಿದ್ದಿಕ್‌ ಲೈಂಗಿಕ ಬೇಡಿಕೆ ಈಡೇರಿಸಲು ತಾನು ನಿರಾಕರಿಸಿದ್ದರಿಂದ ತಿರುವನಂತಪುರದ ಮ್ಯಾಸ್ಕಾಟ್ ಹೋಟೆಲ್‌ನಲ್ಲಿ 2016ರಲ್ಲಿ ತನ್ನ ಮೇಲೆ ಆತ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸಿದ್ದಿಕ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ನ್ಯಾ. ಹೇಮಾ ವರದಿ ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗಾಗಿ ರೂಪುಗೊಂಡಿರುವ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.

ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯಲ್ಲಿ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸಿದ್ದೀಕ್‌ ವಾದಿಸಿದ್ದರು. ಪ್ರಕರಣ ಕುರಿತು ನಟಿ ಒಮ್ಮೊಮ್ಮೆ ಒಂದೊಂದು ರೀತಿಯ ಹೇಳಿಕೆ ನೀಡಿರುವುದು ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಿರುವುದಕ್ಕೆ ಸಾಕ್ಷಿ ಎಂದು ನುಡಿದಿದ್ದರು.