Kalamandalam Sathyabhama, Kerala high court  Kalamandalam Sathyabhama (Youtube)
ಸುದ್ದಿಗಳು

ನೃತ್ಯಗಾರ್ತಿ ಕಲಾಮಂಡಲಂ ಸತ್ಯಭಾಮಾಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್

Bar & Bench

ಸಹಕಲಾವಿದರೊಬ್ಬರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯಡಿ ಆರೋಪಿಯಾಗಿರುವ ಕೇರಳದ ಪ್ರಸಿದ್ಧ ನೃತ್ಯ ಪ್ರಕಾರ ಮೋಹಿನಿಯಾಟ್ಟಂ ಕಲಾವಿದೆ ಕಲಾಮಂಡಲಂ ಸತ್ಯಭಾಮಾ ಅವರಿಗೆ ಕೇರಳ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ [ಸತ್ಯಭಾಮಾ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಸತ್ಯಭಾಮಾ ಅವರು ಆನ್‌ಲೈನ್ ಸಂದರ್ಶನವೊಂದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ರಾಮಕೃಷ್ಣನ್ ಅವರ ಚರ್ಮದ ಬಣ್ಣ, ಅವರ ಕಣ್ಣೋಟದ ಬಗ್ಗೆ ಅವಹೇಳನ ಮಾಡಿದ್ದರು.

ಸತ್ಯಭಾಮಾ ಅವರು ಬಳಸಿರುವ ಪದಗಳು ದಲಿತ ಹಿನ್ನೆಲೆಯ ರಾಮಕೃಷ್ಣನ್ ಅವರನ್ನು ಅವಮಾನಿಸುವ ಉದ್ದೇಶ ಹೊಂದಿವೆ ಎಂದು ನ್ಯಾಯಮೂರ್ತಿ ಕೆ ಬಾಬು ಹೇಳಿದ್ದಾರೆ.

"ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕಾರಣ ಸಾರ್ವಜನಿಕ ದೃಷ್ಟಿಯಲ್ಲಿ ಅವರನ್ನು ಅವಮಾನಿಸುವ ಉದ್ದೇಶದಿಂದ ಮೇಲ್ಮನವಿದಾರೆ ಮೂಲ ದೂರುದಾರನನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ ಎಂದು ಮೇಲ್ನೋಟಕ್ಕೆ ಪ್ರಾಸಿಕ್ಯೂಷನ್ ಸಾಬೀತುಪಡಿಸಬಹುದಾಗಿದೆ" ಎಂಬುದಾಗಿ ನ್ಯಾಯಾಲಯ ಹೇಳಿದೆ.

ಯೂಟ್ಯೂಬ್‌ನಲ್ಲಿ ಎಲ್ಲರೂ ವೀಕ್ಷಿಸಬಹುದಾಗಿರುವುದರಿಂದ ಎಸ್‌ಸಿ, ಎಸ್‌ಟಿ ಕಾಯಿದೆಯ ಸೆಕ್ಷನ್ 3(1) (ಆರ್‌) ಅಡಿಯಲ್ಲಿ ಸಂದರ್ಶನ 'ಸಾರ್ವಜನಿಕ ವೀಕ್ಷಣೆ' ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ನುಡಿದಿದೆ.

ಸಮಾನತೆಗೆ ಬದ್ಧವಾಗಿರುವ ಪ್ರಜಾಪ್ರಭುತ್ವದಲ್ಲಿ ಜಾತಿ ಅಸ್ಮಿತೆ ಆಧಾರದ ಮೇಲೆ ಬಹಿಷ್ಕಾರ ಮತ್ತು ತಾರತಮ್ಯ ಮುಂದುವರಿಕೆಗೆ ಅನುಮತಿ ನೀಡಲು ಸಾಧ್ಯವೇ ಎಂದು ಕೂಡ ನ್ಯಾಯಾಲಯ ಪ್ರಶ್ನಿಸಿದೆ.

ವಿವಾದಾತ್ಮಕ ಸಂದರ್ಶನದಲ್ಲಿ ಸತ್ಯಭಾಮಾ ರಾಮಕೃಷ್ಣನ್ ಅವರ ಮೈಬಣ್ಣದ ಬಗ್ಗೆ ಹೇಳಿಕೆ ನೀಡುತ್ತಾ "ಚಾಲಕುಡಿಯಲ್ಲಿ ಒಬ್ಬ ಕಲಾವಿದನಿದ್ದಾನೆ, ಅವನ ಮೈಬಣ್ಣ ಕಾಗೆಯನ್ನು ಹೋಲುತ್ತದೆ” ಎಂದಿದ್ದರು. ಜೊತೆಗೆ ಮಲಯಾಳಂ ನುಡಿಗಟ್ಟನ್ನು ಬಳಸಿ ತಿರುಕರ ಸಮುದಾಯದ ಸದಸ್ಯ ಎಂದು ಮೂದಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಮಕೃಷ್ಣನ್‌ ಅವರು ಸತ್ಯಭಾಮಾ ವಿರುದ್ಧ ದೂರು ದಾಖಲಿಸಿದ್ದರು.