ಸುದ್ದಿಗಳು

ಆನೆಗಳ ಮೆರವಣಿಗೆಗೆ ಲಗಾಮು, ಕನಿಷ್ಠ 8 ಗಂಟೆ ವಿಶ್ರಾಂತಿ: ಸೆರೆಯಾನೆಗಳ ಕ್ಷೇಮಕ್ಕೆ ಕೇರಳ ಹೈಕೋರ್ಟ್‌ ತುರ್ತು ನಿರ್ದೇಶನ

ಹಬ್ಬ. ಧಾರ್ಮಿಕ ಕಾರ್ಯಕ್ರಮಗಳ ಋತುವು ಸಮೀಪದಲ್ಲಿರುವುದರಿಂದ ಸೆರೆಯಾನೆಗಳನ್ನು ಕ್ರೌರ್ಯದಿಂದ ರಕ್ಷಿಸಲು ಮತ್ತು ಸರ್ಕಾರವು ನಿಯಮಗಳನ್ನು ಜಾರಿಗೆ ತರುವವರೆಗೆ ಆನೆಗಳ ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ನ್ಯಾಯಾಲಯ ಮಧ್ಯಂತರ ಮಾರ್ಗಸೂಚಿ ಹೊರಡಿಸಿದೆ.

Bar & Bench

'ಕೇರಳ ಸೆರೆಯಾನೆಗಳ (ನಿರ್ವಹಣೆ ಮತ್ತು ನಿರ್ವಹಣೆ) ನಿಯಮಗಳು, 2012' ಹಾಗೂ ಉತ್ಸವಗಳು ಮತ್ತು ಮೆರವಣಿಗೆಗಳಲ್ಲಿ ಆನೆಗಳ ಉಪಚಾರ ಮತ್ತು ಪ್ರದರ್ಶನವನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕೇರಳ ಹೈಕೋರ್ಟ್ ಗುರುವಾರ ವಿವರವಾದ ನಿರ್ದೇಶನಗಳನ್ನು ನೀಡಿದೆ. ಸಾಮಾನ್ಯವಾಗಿ ಕೇರಳದಲ್ಲಿ ಸೆರೆಯಾನೆಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತದೆ [ಸೆರೆಯಾನೆಗಳು ವರ್ಸಸ್‌ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು].

ನ್ಯಾಯಮೂರ್ತಿ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಗೋಪಿನಾಥ್ ಪಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಮೆರವಣಿಗೆಗಳು, ಉತ್ಸವಗಳು ಮತ್ತು ಇತರ ಕಾರ್ಯಕ್ರಮಗಳ ವೇಳೆ ಬಳಕೆಯಾಗುವ ಸೆರೆಯಾನೆಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಮತ್ತು ಅವುಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮಧ್ಯಂತರ ಮಾರ್ಗಸೂಚಿಗಳುಳ್ಳ ಆದೇಶವನ್ನು ಹೊರಡಿಸಿದೆ.

ಮೆರವಣಿಗೆ, ವಿವಿಧ ಕಾರ್ಯಕ್ರಮಗಳಲ್ಲಿ ಸೆರೆಯಾನೆಗಳನ್ನು ಬಳಸುವ ವೇಳೆ ಅವುಗಳಿಗೆ ಸಾಕಷ್ಟು ಆಹಾರ, ನೀರು ಮತ್ತು ಆಶ್ರಯದ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕು. ಆನೆಗಳ ನಡುವೆ ಕನಿಷ್ಠ ಅಂತರವನ್ನು ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಮೆರವಣಿಗೆಯಲ್ಲಿ ತಾಳವಾದ್ಯ ವೃಂದ, ಪಟಾಕಿ ಸಿಡಿಸುವವರು ಮುಂತಾದವರಿಂದ ಆನೆಗಳು ಸಾಕಷ್ಟು ಅಂತರದಲ್ಲಿರುವಂತೆ ಸ್ಥಳಾವಕಾಶದ ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳಬೇಕು.

ಆನೆಗಳಿಗೆ 8 ಗಂಟೆಗಳ ಕಾಲ ಕಡ್ಡಾಯ ವಿಶ್ರಾಂತಿಯನ್ನು ನೀಡಬೇಕು. ಆನೆಗಳನ್ನು ಪ್ರದರ್ಶನಗಳಲ್ಲಿ, ಕಾರ್ಯಕ್ರಮಗಳಲ್ಲಿ ಬಳಸುವ ವೇಳೆ 3 ಗಂಟೆಗಳಿಗಿಂತ ಹೆಚ್ಚು ಅವುಗಳನ್ನು ತೊಡಗಿಸಬಾರು ಎಂದು ನ್ಯಾಯಾಲಯವು ತನ್ನ ನಿರ್ದೇಶನಗಳಲ್ಲಿ ಹೇಳಿದೆ.

ಅಲ್ಲದೆ, ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕ ರಸ್ತೆಗಳಲ್ಲಿ ಆನೆಗಳನ್ನು ಮೆರವಣಿಗೆ ಮಾಡುವುದನ್ನು ಮತ್ತು ರಾತ್ರಿ 10 ರಿಂದ ಬೆಳಗ್ಗೆ 4ರ ನಡುವೆ ಆನೆಗಳನ್ನು ಸಾಗಿಸುವುದನ್ನು ನ್ಯಾಯಾಲಯ ನಿರ್ಬಂಧಿಸಿದೆ. ಇದಲ್ಲದೆ, ಆನೆಗಳನ್ನು ದಿನಕ್ಕೆ 30 ಕಿಲೋಮೀಟರ್‌ಗಿಂತ ಹೆಚ್ಚು ನಡೆಯುವಂತೆ ಮಾಡಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಪೀಠವು ತನ್ನ ಆದೇಶದಲ್ಲಿ ಸೆರೆಯಾನೆಗಳು ಮತ್ತು ನಾಜಿ ಜರ್ಮನಿಯ ಯಹೂದಿಗಳ ಶಿಬಿರದ ಕುಖ್ಯಾತ ಕ್ರೌರ್ಯಗಳ ನಡುವಿನ ಸಾಮ್ಯತೆಯ ಬಗ್ಗೆ ಗಮನಸೆಳೆಯಿತು. ಅಲ್ಲದೆ, ಸುಪ್ರೀಂ ಕೋರ್ಟ್‌ ಅನೆಗಳೊಂದಿಗೆ ಮಾನವೀಯವಾಗಿ ವರ್ತಿಸುವಂತೆ ನೀಡಿರುವ ನಿರ್ದೇಶನಗಳ ಹೊರತಾಗಿಯೂ ಕೇರಳ ಸರ್ಕಾರವು ಈ ನಿಯಮಗಳನ್ನು ಜಾರಿಗೊಳಿಸಲು ವಿಫಲವಾಗಿರುವುದನ್ನು ನ್ಯಾಯಾಲಯ ಗಮನಿಸಿತು.

ನಿಯಮಗಳ ಅನುಷ್ಠಾನವನ್ನು ಜಾರಿಗೊಳಿಸುವಲ್ಲಿ ಸರ್ಕಾರವು ಪುನರಾವರ್ತಿತವಾಗಿ ವಿಸ್ತರಣೆಗಳನ್ನು ಮಾಡಿರುವ ನ್ಯಾಯಾಲಯ ಖಂಡಿಸಿತು ಮತ್ತು ಅಂತಹ ವಿಳಂಬಗಳು ಆನೆಗಳ ಸಾವಿನ ಹೆಚ್ಚಳ ಸೇರಿದಂತೆ ಬಂಧಿತ ಆನೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡಿದೆ ಎಂದು ಹೇಳಿದೆ.

ನ್ಯಾಯಾಲಯ ನೀಡಿರುವ ತುರ್ತು ನಿರ್ದೇಶನಗಳು ಕೆಳಕಂಡಂತಿವೆ:

- 2012ರ ನಿಯಮಗಳ ನಿಯಮ 10 ರ ಅಡಿಯಲ್ಲಿ ಸ್ಥಾಪಿಸಲಾದ ಜಿಲ್ಲಾ ಸಮಿತಿಗಳಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ (AWBI) ಒಬ್ಬ ಪ್ರತಿನಿಧಿಯನ್ನು ಸೇರ್ಪಡೆಗೊಳಿಸುವುದು.

- ಉತ್ಸವದ ಆಯೋಜಕರು ಕಾರ್ಯಕ್ರಮಕ್ಕೆ ಕನಿಷ್ಠ ಒಂದು ತಿಂಗಳ ಮೊದಲು ಜಿಲ್ಲಾ ಸಮಿತಿಗೆ ವಿವರವಾದ ಅರ್ಜಿಯನ್ನು ಸಲ್ಲಿಸಬೇಕು. ಅದರಲ್ಲಿ ಆನೆಗಳ ಗುರುತಿನ ವಿವರಗಳು, ಉದ್ದೇಶಿತ ಪ್ರದರ್ಶನದ ದಿನಾಂಕಗಳು, ತಾತ್ಕಾಲಿಕ ಆನೆಲಾಯದ ಸೌಲಭ್ಯಗಳ ಮಾಹಿತಿ, ಮೆರವಣಿಗೆಯ ಮಾರ್ಗ ಮತ್ತು ಸಮಯದ ವಿವರಗಳನ್ನು ತಿಳಿಸಬೇಕು. ಪಶುವೈದ್ಯಕೀಯ ಆರೋಗ್ಯ ಪ್ರಮಾಣಪತ್ರ, ಮತ್ತು ಆನೆಯ ಆರೋಗ್ಯ ಸ್ಥಿತಿ, ಬೆದೆಯ ಅವಧಿಗಳು ಮತ್ತು ಕಳೆದ ವರ್ಷದಲ್ಲಿ ಆನೆಯು ಮೆರವಣಿಗೆಯಲ್ಲಿ ಅಡ್ಡಾದಿಡ್ಡಿ ಓಡಿದ್ದರೆ ಆ ಕುರಿತಾದ ವಿವರ.

- ಸಂಘಟಕರು ಸಾಕಷ್ಟು ಆಹಾರ, ನೀರು ಮತ್ತು ವಸತಿ ವ್ಯವಸ್ಥೆಗಳ ಸಾಕ್ಷ್ಯವನ್ನು ಒದಗಿಸಿದರೆ ಮಾತ್ರ ಜಿಲ್ಲಾ ಸಮಿತಿಯು ಆನೆ ಪ್ರದರ್ಶನಕ್ಕೆ ಅನುಮತಿ ನೀಡಬಹುದು. ತಾತ್ಕಾಲಿಕ ಲಾಯದ ಸ್ವಚ್ಛತೆ, ಆನೆಗೆ ಚಲಿಸಲು ಸಾಕಷ್ಟು ಸ್ಥಳ ಮತ್ತು ಕುಡಿಯುವ ನೀರಿನ ಪ್ರವೇಶದಂತಹ ಕೆಲವು ಮಾನದಂಡಗಳನ್ನು ಪೂರೈಸಬೇಕು.

- ಆನೆಗಳ ನಡುವೆ ಕನಿಷ್ಠ ಅಂತರವನ್ನು ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಮೆರವಣಿಗೆಯಲ್ಲಿ ತಾಳವಾದ್ಯ ವೃಂದ, ಪಟಾಕಿ ಸಿಡಿಸುವವರು ಮುಂತಾದವರಿಂದ ಆನೆಗಳು ಸಾಕಷ್ಟು ಅಂತರದಲ್ಲಿರುವಂತೆ ಸ್ಥಳಾವಕಾಶದ ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳಬೇಕು. ಮೆರವಣಿಗೆ ಮಾರ್ಗವು ಆನೆಗಳ ಕಲ್ಯಾಣ ಅಥವಾ ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗದಂತೆ ಸುರಕ್ಷಿತವಾಗಿ ಮೆರವಣಿಗೆ ಸಾಗಲು ಸಾಕಷ್ಟು ಸ್ಥಳವನ್ನು ಹೊಂದಿರಬೇಕು.

- ಕಾರ್ಯಕ್ರಮದ ಸ್ಥಳಗಳಲ್ಲಿ ತಾತ್ಕಾಲಿಕ ಲಾಯ ಸೌಲಭ್ಯಗಳು ಕಟ್ಟುನಿಟ್ಟಾದ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು, ಕನಿಷ್ಠ 9 ಮೀಟರ್‌ನಿಂದ 6 ಮೀಟರ್‌ಗಳಷ್ಟು ನೆಲದ ವಿಸ್ತೀರ್ಣ ಮತ್ತು ಕನಿಷ್ಠ 5.5 ಮೀಟರ್‌ಗಳಷ್ಟು ಎತ್ತರವಿರುವ ಆಶ್ರಯದ ಅವಶ್ಯಕತೆಯೂ ಸೇರಿದಂತೆ ನೆರಳು, ಸರಿಯಾದ ಒಳಚರಂಡಿ ಮತ್ತು ಶುದ್ಧ ನೀರಿನ ಲಭ್ಯತೆ ಕಲ್ಪಿಸಬೇಕು.

- ನೆಲವನ್ನು ನೈಸರ್ಗಿಕ ವಸ್ತುಗಳಿಂದ ಒಣಗಿಸುವಂತೆ ಏರ್ಪಾಟು ಮಾಡಿಕೊಳ್ಳಬೇಕು. ಆನೆಗಳು ತಮ್ಮದೇ ತ್ಯಾಜ್ಯದಲ್ಲಿ ನಿಲ್ಲುವುದನ್ನು ತಡೆಯಲು ಶುಚಿತ್ವವನ್ನು ಖಾತರಿಪಡಿಸಿಕೊಳ್ಳಬೇಕು.

- ಆನೆಗಳ ನಡುವೆ ಕನಿಷ್ಠ 3 ಮೀಟರ್ ಅಂತರವಿರಬೇಕು. ಬೆಂಕಿಯ ಮೂಲಗಳಿಂದ 5 ಮೀಟರ್ ಮತ್ತು ಸಾರ್ವಜನಿಕರಿಂದ ಕನಿಷ್ಠ 8 ಮೀಟರ್ ಅಂತರವನ್ನು ಕಾಪಾಡಿಕೊಳ್ಳಬೇಕು.

- ಸಾರ್ವಜನಿಕ ರಸ್ತೆಗಳಲ್ಲಿ ಆನೆಗಳ ಮೆರವಣಿಗೆಯನ್ನು ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ ಅನುಮತಿಸಲಾಗುವುದಿಲ್ಲ ಮತ್ತು ಅವುಗಳನ್ನು ರಾತ್ರಿ 10:00 ರಿಂದ ಬೆಳಿಗ್ಗೆ 4:00 ರವರೆಗೆ ಸಾಗಿಸಬಾರದು. ದಿನಕ್ಕೆ 30 ಕಿಲೋಮೀಟರ್‌ಗಳಿಗಿಂತ ಹೆಚ್ಚು ನಡೆಯುವಂತೆ ಮಾಡಬಾರದು.

- ಯಾವುದೇ ಆನೆಯನ್ನು ನಿರಂತರವಾಗಿ 3 ಗಂಟೆಗಳಿಗಿಂತ ಹೆಚ್ಚು ಕಾಲ ಪ್ರದರ್ಶನದಲ್ಲಿ ಬಳಸಬಾರದು. 24 ಗಂಟೆಗಳ ಅವಧಿಯಲ್ಲಿ ಆನೆಗಳು ಕನಿಷ್ಠ 8 ಗಂಟೆಗಳ ವಿಶ್ರಾಂತಿ ಪಡೆಯಬೇಕು.

- ಪಟಾಕಿ ಅಥವಾ ಬೆಂಕಿಗೆ ಸಂಬಂಧಿಸಿದ ಚಟುವಟಿಕೆಗಳು ಆನೆಗಳಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು ಮತ್ತು ಆನೆಗಳು ಸಾಗುವ ಮಾರ್ಗವು ಅಧಿಕ ಶಾಖ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು.

ಹೀಗೆ ಇನ್ನು ಮುಂತಾದ ಹಲವು ನಿರ್ದೇಶನಗಳನ್ನು ನ್ಯಾಯಾಲಯವು ನೀಡಿದೆ.