ಸುದ್ದಿಗಳು

ಬಿಗ್‌ಬಾಸ್‌ನಲ್ಲಿ ಹಿಂಸೆ: ಸಮಸ್ಯೆ ಪರಿಹರಿಸಲು ಕೇಂದ್ರಕ್ಕೆ ಕೇರಳ ಹೈಕೋರ್ಟ್ ಸೂಚನೆ; ಮೋಹನ್‌ ಲಾಲ್‌ ಇತರರಿಗೆ ನೋಟಿಸ್

ಇದು ಗಂಭೀರ ವಿಚಾರ ಎಂದಿರುವ ನ್ಯಾಯಾಲಯ. ಕೂಡಲೇ ಸಮಸ್ಯೆ ಬಗೆಹರಿಸುವಂತೆ, ಅಗತ್ಯಬಿದ್ದರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಾರ್ಯಕ್ರಮ ಪ್ರಸಾರ ಸ್ಥಗಿತಗೊಳಿಸುವಂತೆ ಕೇಂದ್ರಕ್ಕೆ ಸೂಚನೆ.

Bar & Bench

ಮಲಯಾಳಂ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಕೆಲ ಹಿಂಸಾತ್ಮಕ ದೃಶ್ಯಗಳು ಪ್ರಸಾರವಾದ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸುವಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ [ವಕೀಲ. ಆದರ್ಶ್ ಎಸ್  ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಸಮಸ್ಯೆ ಗಂಭೀರವಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಸ್ತಾಕ್ ಮತ್ತು ಎಂ ಎ ಅಬ್ದುಲ್ ಹಕೀಂ ಅವರಿದ್ದ ಪೀಠ ಕೇಂದ್ರದ ಸಲಹೆ ಸೂಚನೆಗಳ ಉಲ್ಲಂಘನೆಯಾಗಿದ್ದರೆ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ವಿದ್ಯುನ್ಮಾನ ಮಾಧ್ಯಮದಲ್ಲಿ ಇಂತಹ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸುವ ಮೂಲಕವೂ ಇದನ್ನು ಮಾಡಬಹುದು ಎಂದು ಪೀಠ ಹೇಳಿದೆ.

ಕಾರ್ಯಕ್ರಮದ ನಿರೂಪಕ ಮಲಯಾಳಂ ನಟ ಮೋಹನ್‌ಲಾಲ್, ನಿರ್ಮಾಣ ಕಂಪನಿ ಎಂಡೆಮೊಲ್ ಶೈನ್ ಇಂಡಿಯಾ ಹಾಗೂ ಪ್ರಸಾರಕ ಸಂಸ್ಥೆಗಳಾಗಿರುವ ಏಷ್ಯಾನೆಟ್ ಹಾಗೂ ಡಿಸ್ನಿ ಸ್ಟಾರ್‌ಗೂ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಅಲ್ಲದೆ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಸಹ ಸ್ಪರ್ಧಿಗೆ ಗುದ್ದಿದ ಎಎಸ್‌ಐ ರಾಕಿ ಎಂದೂ ಕರೆಯಲಾಗುವ ಹಸೀಬ್ ಎಸ್‌ಕೆಗೆ ನೋಟಿಸ್ ನೀಡಲಾಗಿದೆ. ಘಟನೆ ಬಳಿಕ ರಾಕಿಯನ್ನು ರಿಯಾಲಿಟಿ ಕಾರ್ಯಕ್ರಮದಿಂದ ಹೊರಹಾಕಲಾಗಿತ್ತು.

ಬಿಗ್ ಬಾಸ್ ಮಲಯಾಳಂ ಸೀಸನ್ 6 ಕಾರ್ಯಕ್ರಮದ ಪ್ರಸಾರವನ್ನು ತಕ್ಷಣವೇ ನಿಲ್ಲಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ ವಕೀಲ ಆದರ್ಶ್‌ ಎಸ್‌ ಅವರು ಅರ್ಜಿ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರ ನೀಡಿದ ನಿರ್ದೇಶನ ಮತ್ತು ಸಲಹೆಗಳನ್ನು ಉಲ್ಲಂಘಿಸಿ ಕಾರ್ಯಕ್ರಮದಲ್ಲಿ ದೈಹಿಕ ಹಲ್ಲೆಯ ಘಟನೆಗಳು ನಡೆದಿವೆ ಎಂದು ಅರ್ಜಿದಾರರು ದೂರಿದ್ದರು.

ಏಷ್ಯಾನೆಟ್‌ ಕಾರ್ಯಕ್ರಮ ಪ್ರಸಾರ ಮಾಡಿರುವುದು ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ, 1995 ಮತ್ತು ಸಂಬಂಧಿತ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಯಲ್ಲಿ ಉಲ್ಲೇಖಿಸಲಾಗಿರುವ ನಿಯಮಗಳಿಗೆ ವಿರುದ್ಧ. ಮೋಹನ್ ಲಾಲ್ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಿದ ರೀತಿಯೂ ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅರ್ಜಿದಾರರು ತಿಳಿಸಿದ್ದರು.

ಹಿಂಸಾತ್ಮಕ ದೃಶ್ಯಗಳ ಪ್ರತಿಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಕಳುಹಿಸಲು ಅರ್ಜಿದಾರರಿಗೆ ನ್ಯಾಯಾಲಯ ಅನುಮತಿ ನೀಡಿದೆ. ಮೇ 20ರಂದು ಮುಂದಿನ ವಿಚಾರಣೆ ನಡೆಯಲಿದೆ.