Kerala High Court, Pinarayi Vijayan A1
ಸುದ್ದಿಗಳು

ಚಿನ್ನ ಕಳ್ಳಸಾಗಣೆ: ಕೇರಳ ಸಿಎಂ ಪಿಣರಾಯಿ ವಿರುದ್ಧ ನ್ಯಾಯಯುತ ತನಿಖೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

ಎರಡು ಸಂಸ್ಥೆಗಳು ನಡೆಸುವ ತನಿಖೆಯು ಸಮರ್ಪಕವೂ, ನ್ಯಾಯಯುತವೂ ಆಗಿರದು ಎಂದು ಅರ್ಜಿದಾರರು ವ್ಯಕ್ತಪಡಿಸಿದ ಆತಂಕಕ್ಕೆ ಯಾವುದೇ ಆಧಾರ ಇಲ್ಲ ಎಂಬುದಾಗಿ ತಿಳಿಸಿದ ಪೀಠ ಅರ್ಜಿಯನ್ನು ವಜಾಗೊಳಿಸಿತು.

Bar & Bench

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲಮಿತಿಯ ಹಾಗೂ ನ್ಯಾಯಸಮ್ಮತವಾದ ತನಿಖೆ ನಡೆಸಲು ಕಸ್ಟಮ್ಸ್‌ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ [ಅಜಿ ಕೃಷ್ಣನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೇಂದ್ರ ಸರ್ಕಾರದ ಎರಡು ತನಿಖಾ ಸಂಸ್ಥೆಗಳು ನಡೆಸುತ್ತಿರುವ ತನಿಖೆ ಮೇಲೆ ನ್ಯಾಯಾಲಯದ ನಿಗಾ ವಹಿಸಲು ಸಹ ಆದೇಶಿಸುವಂತೆ ಅಜಿ ಕೃಷ್ಣನ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಈ ಎರಡು ಸಂಸ್ಥೆಗಳು ನಡೆಸುವ ತನಿಖೆಯು ನ್ಯಾಯಯುತ ಮತ್ತು ಸಮಂಜಸವಾಗಿರುವುದಿಲ್ಲ ಎಂದು ಅರ್ಜಿದಾರರು ವ್ಯಕ್ತಪಡಿಸಿರುವ ಆತಂಕಕ್ಕೆ ಯಾವುದೇ ಆಧಾರ ಇಲ್ಲ ಎಂದು ತಿಳಿಸಿ ನ್ಯಾ. ಬೆಚು ಕುರಿಯನ್‌ ಥಾಮಸ್‌ ಅರ್ಜಿಯನ್ನು ವಜಾಗೊಳಿಸಿದರು.

ನ್ಯಾಯಯುತ ಮತ್ತು ಸೂಕ್ತ ತನಿಖೆ ನಡೆಯುತ್ತಿಲ್ಲ ಎಂಬ ಬಗ್ಗೆ ಅರ್ಜಿದಾರರು ವ್ಯಕ್ತಪಡಿಸಿದ ಆತಂಕಕ್ಕೆ ಯಾವುದೇ ಆಧಾರ ಇಲ್ಲದಿರುವುದು ಸ್ಪಷ್ಟವಾಗಿದೆ. ಕಸ್ಟಮ್ಸ್‌ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿವೆ. ತನಿಖೆಯಲ್ಲಿ ಯಾವುದೇ ವ್ಯಕ್ತಿ ಶಾಮೀಲಾಗಿರುವುದು ಬಹಿರಂಗವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂಬ ಊಹೆಗೂ ಯಾವುದೇ ಕಾರಣಗಳಿಲ್ಲ. ಏಕೆಂದರೆ ʼನೀವು ಎಷ್ಟೇ ಎತ್ತರದಲ್ಲಿದ್ದರೂ ಕಾನೂನು ನಿಮಗಿಂತಲೂ ಮೇಲಿರುತ್ತದೆʼ ಎಂಬ ವಾಕ್ಯ ಸ್ಥಾನಮಾನ ಅಥವಾ ಹುದ್ದೆಯನ್ನು ಲೆಕ್ಕಿಸದೆ ಎಲ್ಲರಿಗೂ ಸಮನಾಗಿ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

ಚಿನ್ನದ ಕಳ್ಳಸಾಗಣೆ ಪ್ರಕರಣ ಜುಲೈ 2020ರಷ್ಟು ಹಿಂದಿನದಾಗಿದ್ದು, ಅಕ್ರಮ ಹಣ ವರ್ಗಾವಣೆ, ಅಕ್ರಮ ಹಣಕಾಸು ವಹಿವಾಟು ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರಿ ಪ್ರಮಾಣದಲ್ಲಿ ಚಿನ್ನದ ಕಳ್ಳಸಾಗಣೆ ನಡೆಸಿರುವ ಕುರಿತು ವಿವಿಧ ತನಿಖಾ ಸಂಸ್ಥೆಗಳು ನಡೆಸಿದ ತನಿಖೆಗಳ ಪ್ರಕಾರ, ಶಂಕಿತ ಅಪರಾಧಿಗಳನ್ನು ಕೇರಳದಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗಿದೆ.