Kerala Life Mission 
ಸುದ್ದಿಗಳು

ಲೈಫ್‌ ಮಿಷನ್‌ ಯೋಜನೆ: ಸಿಬಿಐ ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿಗಳನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್‌

ಕೇರಳದಲ್ಲಿ ಭಾರಿ ಸಂಚನಲ ಸೃಷ್ಟಿಸಿರುವ ಲೈಫ್‌ ಮಿಷನ್‌ ಯೋಜನೆಯ ಪ್ರಕರಣದ ಕುರಿತು ನ್ಯಾಯಮೂರ್ತಿ ಪಿ ಸೋಮರಾಜನ್‌ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ತೀರ್ಪು ಪ್ರಕಟಿಸಿದೆ.

Bar & Bench

ಕೇರಳ ಸರ್ಕಾರದ ಲೈಫ್‌ ಮಿಷನ್‌ ಯೋಜನೆಯ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಕೇರಳ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ (ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಸಸ್‌ ಸಿಬಿಐ, ಸಂತೋಷ್‌ ಎಪ್ಪೆನ್‌ ವರ್ಸಸ್‌ ಭಾರತ ಸರ್ಕಾರ).

ಯೋಜನೆ ಜಾರಿಗೊಳಿಸುವ ಹೊಣೆ ಹೊತ್ತಿರುವ ಅಧಿಕಾರಿಗಳು ಯೋಜನೆಯ ಮೂಲಕ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರಲು ಯತ್ನಿಸುತ್ತಿದ್ದಾರೆ. ಉಲ್ಲಂಘನೆಯನ್ನು ಲಿಖಿತವಾಗಿ ಗಮನಕ್ಕೆ ತರದಿದ್ದರೆ ಅಥವಾ ಅವರ ಕಿಡಿಗೇಡಿತನದಿಂದ ವೈಯಕ್ತಿಕ ಲಾಭ ಪಡೆದುಕೊಳ್ಳದ ಹೊರತು ಅಂತಹ ಕಿಡಿಗೇಡಿತನದ ಹೊಣೆಗಾರಿಕೆಯನ್ನು ರಾಜಕೀಯ ಕಾರ್ಯನಿರ್ವಾಹಕರಿಗೆ ವಿಸ್ತರಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಪಿ ಸೋಮರಾಜನ್‌ ಅವರಿದ್ದ ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.

ಒಡಂಬಡಿಕೆಯ ಭಾಗವಾಗಿ ಬೌದ್ಧಿಕ ವಂಚನೆಯ ಕೃತ್ಯ ನಡೆಸಲಾಗಿದ್ದು, ಈ ಮೂಲಕ ಮಹಾ ಲೆಕ್ಕಪರಿಶೋಧಕರಿಂದ (ಸಿಎಜಿ) ಲೆಕ್ಕಪರಿಶೋಧನೆ ತಡೆಯುವುದು ಮತ್ತು ಲಂಚ ಹಾಗೂ ಪ್ರತಿಫಲ ಪಡೆಯುವ ಯೋಜನೆ ಇದಾಗಿದೆ ಎಂದು ನ್ಯಾಯಾಲಯ ಹೇಳಿದ್ದು, ಯುಎಇ ಕಾನ್ಸುಲೇಟ್‌ ಮತ್ತು ಕೇರಳ ಸರ್ಕಾರದ ನಡುವಿನ ಒಡಂಬಡಿಕೆಯು ಬಹುತೇಕ ಒಪ್ಪಿತ ಒಪ್ಪಂದವಾಗಿದೆ ಎಂದು ಹೇಳಿದೆ.

ಸಂವಿಧಾನದ 299ನೇ ವಿಧಿಗೆ ಅನುಗುಣವಾಗಿ ಸರ್ಕಾರಿ ಒಪ್ಪಂದಕ್ಕೆ ಸಂಬಂಧಿಸಿದ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಸಿಎಜಿ ಲೆಕ್ಕ ಪರಿಶೋಧನೆ ತಪ್ಪಿಸಲು ಹಾಗೆ ಮಾಡಲಾಗಿದೆ ಎಂದು ಪೀಠ ಹೇಳಿದೆ.

ತ್ರಿಶ್ಯೂರ್‌ ಜಿಲ್ಲೆಯ ವಡಕ್ಕಂಚೆರಿ ಶಾಸಕ ಅನಿಲ್‌ ಅಕ್ಕಾರ ಅವರು ಲೈಫ್‌ ಮಿಷನ್‌ ಯೋಜನೆಯು ವಿದೇಶಿ ಹಣ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ನಿಯಮಗಳನ್ನು ಉಲ್ಲಂಘಿಸಿದೆ ಎಂದು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಲೈಫ್‌ ಮಿಷನ್‌ ಯೋಜನೆಯು ವಿವಾದಕ್ಕೆ ಸಿಲುಕಿದೆ.