Kerala High Court, Malayalam 
ಸುದ್ದಿಗಳು

ಕೇರಳ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳಲ್ಲೀಗ ಮಲಯಾಳಿ ನುಡಿಗಾರ್ತಿಯ ಸೊಬಗು; ಹೆಸರು 'ಅನುವಾದಿನಿ'

ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳು ಇಂಗ್ಲಿಷ್‌ನಲ್ಲಿರುವ ತೀರ್ಪುಗಳನ್ನು ಕೃತಕ ಬುದ್ಧಿಮತ್ತೆಯ ಸಾಧನ ಬಳಸಿ ಮಲಯಾಳಂಗೆ ಅನುವಾದಿಸಿ ತಮ್ಮ ಅಧಿಕೃತ ವೆಬ್‌ತಾಣದಲ್ಲಿ ಪ್ರಕಟಿಸುತ್ತಿವೆ.

Bar & Bench

ಈಕೆ ಕೇರಳ ಹೈಕೋರ್ಟ್‌ ಹಾಗೂ ಜಿಲ್ಲಾ ನ್ಯಾಯಾಲಯಗಳ ʼನೂತನ ಉದ್ಯೋಗಿʼ. ಬಲ್ಲ ಭಾಷೆಗಳು ಮಲಯಾಳಿ ಹಾಗೂ ಇಂಗ್ಲಿಷ್‌. ಹೆಸರು ʼಅನುವಾದಿನಿʼ. ನೀವು ಈಕೆಯನ್ನು ʼಎ ಐʼ ಅನುವಾದಿನಿ ಎಂತಲೂ ಕರೆಯಬಹುದು. ತನ್ನ ಕೆಲಸದ ಮೂಲಕ ನ್ಯಾಯಾಲಯಗಳನ್ನು ಮತ್ತು ಜನಸಾಮಾನ್ಯರನ್ನು ಮತ್ತಷ್ಟು ಹತ್ತಿರಕ್ಕೆ ಬೆಸೆಯಲು ಹೊರಟಿದ್ದಾಳೆ ಈ ನುಡಿ ಬೆಡಗಿ.

ಆದರೆ ಈಕೆ ಮನುಷ್ಯರೂಪಿಯಲ್ಲ. ಸಾಧನಸ್ವರೂಪಿ. ಕೇರಳ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳು ತಮ್ಮ ತೀರ್ಪುಗಳನ್ನು ಮಲಯಾಳಂ ಭಾಷೆಯಲ್ಲಿ ಪ್ರಕಟಿಸುವ ಉದ್ದೇಶದಿಂದ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನ- ಎ ಐ (ಕೃತಕ ಬುದ್ಧಿಮತ್ತೆ) 'ಅನುವಾದಿನಿ' ಎಂಬ ಸಾಧನ ಬಳಸುತ್ತಿವೆ. ಅಖಿಲ ಭಾರತ ಶಿಕ್ಷಣ ಸಚಿವಾಲಯದ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಈ ಸಾಧನವನ್ನು ಅಭಿವೃದ್ಧಿಪಡಿಸಿವೆ. ರಾಜ್ಯದ ನ್ಯಾಯಾಲಯಗಳು ತೀರ್ಪುಗಳನ್ನು ಮಲಯಾಳಂಗೆ ಭಾಷಾಂತರಿಸಿ ಪ್ರಕಟಿಸಲು ಈ ಸಾಧನವನ್ನು ಯಶಸ್ವಿಯಾಗಿ ಬಳಸುತ್ತಿವೆ.

ಪ್ರಸ್ತುತ ಈ ಸಾಧನವನ್ನು ಬಳಸಿ 317ಕ್ಕೂ ಹೆಚ್ಚು ಹೈಕೋರ್ಟ್ ಮತ್ತು 5,136 ಕ್ಕೂ ಹೆಚ್ಚು ತೀರ್ಪುಗಳನ್ನು ಇಂಗ್ಲಿಷ್‌ನಿಂದ ಮಲಯಾಳಂಗೆ ಭಾಷಾಂತರಿಸಲಾಗಿದ್ದು ಆಯಾ ನ್ಯಾಯಾಲಯಗಳ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ ಎಂದು ಹೈಕೋರ್ಟ್‌ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಗಣಕೀಕರಣ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಅವರ ನೇತೃತ್ವದಲ್ಲಿ  ಕೃತಕ ಬುದ್ಧಿಮತ್ತೆ ನೆರವಿನ ಕಾನೂನು ಅನುವಾದ ಸಲಹಾ ಸಮಿತಿಯ ಸದಸ್ಯರಾದ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೌಸರ್ ಎಡಪ್ಪಗತ್ ಅವರ ಮಾರ್ಗದರ್ಶನದಲ್ಲಿ ಕೃತಕ ಬುದ್ಧಿಮತ್ತೆ ಅನುವಾದ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

"ಮೊದಲ ಹಂತದಲ್ಲಿ, ಮಲಯಾಳಂನಲ್ಲಿ ವರದಿ ಮಾಡಲು ಪ್ರಮಾಣೀಕರಿಸಿದ ಎಲ್ಲಾ ತೀರ್ಪುಗಳನ್ನು ಭಾಷಾಂತರಿಸಿ ಲಭ್ಯವಾಗುವಂತೆ ಮಾಡಲು ಕೇರಳ ಹೈಕೋರ್ಟ್ ಪ್ರಸ್ತಾವನೆ ಹೊಂದಿದೆ" ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಸರ್ಕಾರಿ ಇಲಾಖೆಗಳು , ದಾವೆದಾರರು ಸೇರಿದಂತೆ ವಿವಿಧ ಪಾಲುದಾರರಿಗೆ ಕಾನೂನು ಶಿಕ್ಷಣ ಮತ್ತು ಜಾಗೃತಿ ಮೂಡಿಸಲು ಕಾನೂನು ಸೇವಾ ಪ್ರಾಧಿಕಾರದೊಂದಿಗೆ ತೀರ್ಪುಗಳ ಅನುವಾದಿತ ಆವೃತ್ತಿಗಳನ್ನು ಹಂಚಿಕೊಳ್ಳುವ ಪ್ರಸ್ತಾವನೆ ಇದೆ ಎಂದು ಕೂಡ  ಹೈಕೋರ್ಟ್‌ ವಿವರಿಸಿದೆ.  

[ಪತ್ರಿಕಾ ಪ್ರಕಟಣೆಯನ್ನು ಇಲ್ಲಿ ಓದಿ]

Kerala_High_Court_translation_of_judgments.pdf
Preview