Kalamandalam Sathyabhama, Kerala high court  Kalamandalam Sathyabhama (Youtube)
ಸುದ್ದಿಗಳು

ಎಸ್‌ಸಿ/ಎಸ್‌ಟಿ ಕಾಯಿದೆ ಪ್ರಕರಣ: ನೃತ್ಯಗಾರ್ತಿ ಕಲಾಮಂಡಲಂ ಸತ್ಯಭಾಮಾಗೆ ಕೇರಳ ಹೈಕೋರ್ಟ್ ಮಧ್ಯಂತರ ರಕ್ಷಣೆ

Bar & Bench

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯಡಿ ದಾಖಲಾದ ಪ್ರಕರಣ ಕುರಿತಂತೆ ಮೋಹಿನಿಯಾಟ್ಟಂ ಕಲಾವಿದೆ ಕಲಾಮಂಡಲಂ ಸತ್ಯಭಾಮಾ ಅವರನ್ನು ಮೇ 27ರವರೆಗೆ ಬಂಧಿಸದಂತೆ ಕೇರಳ ಹೈಕೋರ್ಟ್ ಸೋಮವಾರ ಮಧ್ಯಂತರ ರಕ್ಷಣೆ ನೀಡಿದೆ [ಸತ್ಯಭಾಮಾ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಸಹ ಕಲಾವಿದ ಆರ್‌ ಎಲ್‌ ವಿ ರಾಮಕೃಷ್ಣನ್ ಅವರ  ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪ ನೃತ್ಯ ಕಲಾವಿದೆ ಅವರ ಮೇಲಿದೆ. ಯೂಟ್ಯೂಬ್‌ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ನಿಂದನೆ ಮಾಡಲಾಗಿತ್ತು.

ಸತ್ಯಭಾಮಾ ಅವರಿಗೆ ರಕ್ಷಣೆ ನೀಡಿರುವ ನ್ಯಾ. ಕೆ ಬಾಬು ಅವರು ಪ್ರಕರಣದ ಸಂಬಂಧ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ತಿಳಿಸಿದರು.

ಎಸ್‌ಸಿ- ಎಸ್‌ಟಿ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯ ತನಗೆ ನಿರೀಕ್ಷಣಾ ಜಾಮೀನು ನೀಡದಿರುವುದನ್ನು ಪ್ರಶ್ನಿಸಿ ಸತ್ಯಭಾಮಾ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ಮೇಲ್ನೋಟಕ್ಕೆ ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದಿದ್ದ ನ್ಯಾಯಾಲಯ ಏಪ್ರಿಲ್‌  22ರಂದು ಆಕೆಯ ಅರ್ಜಿ ತಿರಸ್ಕರಿಸಿತ್ತು.

ರಾಮಕೃಷ್ಣ ಅವರ ಕಣ್ಣೋಟ ಮತ್ತು ಚರ್ಮದ ಬಣ್ಣದ ಬಗ್ಗೆ ಸತ್ಯಭಾಮಾ ಅವಹೇಳನ ಮಾಡಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದ ರಾಮಕೃಷ್ಣನ್‌ ಎಸ್‌ಸಿ/ಎಸ್‌ಟಿ ಕಾಯಿದೆ ಪ್ರಕಾರ ನೃತ್ಯಗಾರ್ತಿ ತಪ್ಪೆಸಗಿದ್ದಾರೆ ಎಂದಿದ್ದರು. ಆದರೆ ತನಗೆ ರಾಮಕೃಷ್ಣ ಅವರ ಜಾತಿ ಬಗ್ಗೆ ತಿಳಿದಿರಲಿಲ್ಲ. ತಾನು ಯಾವುದೇ ತಪ್ಪೆಸಗಿಲ್ಲ ಎಂದು ನೃತ್ಯ ಕಲಾವಿದೆ ವಾದಿಸಿದ್ದರು.