ಸುದ್ದಿಗಳು

ಮಗಳ ಪಾಸ್‌ಪೋರ್ಟ್‌ಗಾಗಿ ವಿಚ್ಛೇದಿತ ತಾಯಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ: ಪಾಸ್‌ಪೋರ್ಟ್‌ ಅಧಿಕಾರಿಗೆ ₹ 25 ಸಾವಿರ ದಂಡ

Bar & Bench

ವಿಚ್ಛೇದಿತ ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳ ಪಾಸ್‌ಪೋರ್ಟ್ಅನ್ನು ಪುನಃ ಪಡೆಯಲು ನ್ಯಾಯಾಲಯದ ಕಟಕಟೆಯನ್ನು ಅನಿವಾರ್ಯವಾಗಿ ಏರುವಂತೆ ಮಾಡಿದ ಪಾಸ್‌ಪೋರ್ಟ್‌ ಅಧಿಕಾರಿಗೆ ಕೇರಳ ಹೈಕೋರ್ಟ್‌ ಇತ್ತೀಚೆಗೆ ₹25 ಸಾವಿರ ದಂಡ ವಿಧಿಸಿದೆ [ಶೈನಿ ಶುಕೂರ್‌ ವರ್ಸಸ್‌ ಭಾರತ ಸರ್ಕಾರ].

ವೈವಾಹಿಕ ವ್ಯಾಜ್ಯದಲ್ಲಿರುವ ಅನೇಕ ಏಕ ಪೋಷಕರು ಸೂಕ್ತ ದಾಖಲಾತಿಗಳನ್ನು ಸಲ್ಲಿಸಿದ ಬಳಿಕವೂ ತಮ್ಮ ಮಕ್ಕಳ ಪಾಸ್‌ಪೋರ್ಟ್‌ನ ಮರುನೀಡಿಕೆಗಾಗಿ ಆದೇಶವನ್ನು ಪಡೆಯಲು ಬಲವಂತವಾಗಿ ನ್ಯಾಯಾಲಯದ ಕಟಕಟೆ ಏರುವಂತಾಗಿರುವುದನ್ನು ನ್ಯಾ. ಅಮಿತ್‌ ರಾವಲ್‌ ಅವರಿದ್ದ ಏಕಸದಸ್ಯ ಪೀಠ ಇದೇ ವೇಳೆ ಗಮನಿಸಿತು.

ಪಾಸ್‌ಪೋರ್ಟ್‌ ಅನ್ನು ನೀಡುವಂತಹ ಉನ್ನತ ಅಧಿಕಾರ ಸ್ಥಾನದಲ್ಲಿರುವ ಅಧಿಕಾರಿಗಳು ಅರ್ಜಿಗಳನ್ನು ವಾಸ್ತವಿಕತೆಯ ಆಧಾರದಲ್ಲಿ ಹಾಗೂ ಉದಾರವಾಗಿ ಪರಿಗಣಿಸಬೇಕೇ ಹೊರತು ಮೇಲೆ ಹೇಳಿದ ರೀತಿಯಲ್ಲಿ ತಿರಸ್ಕರಿಸಬಾರದು ಎಂದು ನ್ಯಾಯಾಲಯ ಆದೇಶದ ವೇಳೆ ತಿಳಿಸಿತು. ಅಲ್ಲದೆ, ಘಟನೆಗೆ ಕಾರಣರಾದ ಪಾಸ್‌ಪೋರ್ಟ್‌ ಅಧಿಕಾರಿಗೆ ₹ 25 ಸಾವಿರ ದಂಡ ವಿಧಿಸಿತು. ಅಲ್ಲದೆ, ನ್ಯಾಯಾಲಯದ ಆದೇಶವನ್ನು ರಾಜ್ಯದ ಎಲ್ಲ ಪಾಸ್‌ಪೋರ್ಟ್‌ ಕಚೇರಿಗಳಿಗೂ ಕಳುಹಿಸುವಂತೆ ಸೂಚಿಸಿತು.