ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಮತ್ತು ಕೇರಳ ಹೈಕೋರ್ಟ್
ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಮತ್ತು ಕೇರಳ ಹೈಕೋರ್ಟ್ 
ಸುದ್ದಿಗಳು

ಪುರುಷರೂ ಲೈಂಗಿಕ ದೌರ್ಜನ್ಯಕ್ಕೀಡಾಗಬಹುದು; ಅನೇಕ ಪೋಕ್ಸೊ ಪ್ರಕರಣಗಳ ಸಂತ್ರಸ್ತರು ಬಾಲಕರು: ಕೇರಳ ಹೈಕೋರ್ಟ್

Bar & Bench

ಮಹಿಳೆಯರು ಮಾತ್ರವಲ್ಲದೆ ಪುರುಷರೂ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಾರೆ ಎಂದು ಕೇರಳ ಹೈಕೋರ್ಟ್‌ ಬುಧವಾರ ಅಭಿಪ್ರಾಯಪಟ್ಟಿದೆ.

ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದವರಲ್ಲಿ ಬಹುತೇಕರು ಮಹಿಳೆಯರಾಗಿದ್ದರೂ, ಪುರುಷರ ಮೇಲೆ ಅಂತಹ ದೌರ್ಜನ್ಯ ನಡೆಯುವ ಸಾಧ್ಯತೆಯನ್ನು ನಿರ್ಲಕ್ಷಿಸಲಾಗದು ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಮೌಖಿಕವಾಗಿ ಅಭಿಪ್ರಾಯಪಟ್ಟರು.

"ಲೈಂಗಿಕ ದೌರ್ಜನ್ಯ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ, ಇದನ್ನು ಹುಡುಗರೂ ಎದುರಿಸುತ್ತಾರೆ. ಅಪರೂಪವಾದರೂ ಅದು ಸಾಧ್ಯವಿದೆ. ಅದು ನಡೆಯುತ್ತಿದೆ ಎಂದು ನನಗೆ ತಿಳಿದಿದೆ. ಆದರೆ ಸಾಮಾನ್ಯವಾಗಿ ನಾವು ಮಹಿಳೆಯರ ಪರ ಕಾಳಜಿ ವಹಿಸುತ್ತೇವೆ. ಸಾಮಾನ್ಯವಾಗಿ, ಕೆಲ ಕಾರಣಗಳಿಗಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ ಶೇಕಡಾ ತೊಂಬತ್ತೊಂಬತ್ತರಷ್ಟು ಮಹಿಳೆಯರಾಗಿದ್ದಾರೆ" ಎಂದು ಅವರು ತಿಳಿಸಿದರು.

ಕೇರಳದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನು ಪರೀಕ್ಷಿಸಲು ಸ್ತ್ರೀರೋಗತಜ್ಞರಿಗೆ, ಮುಖ್ಯವಾಗಿ ಮಹಿಳಾ ಸ್ತ್ರೀರೋಗತಜ್ಞರಿಗೆ ಸೂಚಿಸುವ ಶಿಷ್ಟಾಚಾರ ಪ್ರಶ್ನಿಸಿ ವೈದ್ಯರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಹುತೇಕ ಸಂದರ್ಭಗಳಲ್ಲಿ ಮಹಿಳೆಯರು ಅಥವಾ ಹುಡುಗಿಯರ ಸಲುವಾಗಿಯೇ ಇದ್ದರೂ ಸಂತ್ರಸ್ತರನ್ನು ಬೆಂಬಲಿಸುವುದಕ್ಕಾಗಿ ಈ ಶಿಷ್ಟಾಚಾರ ಇದೆ ಎಂದು ನ್ಯಾಯಾಲಯ ತಿಳಿಸಿತು.

"ನೀವು ಯಾಕೆ ಕಾಳಜಿ ವಹಿಸಬೇಕು ಎಂದು ನನಗೆ ತೋರುತ್ತಿಲ್ಲ. ನಾವು ಸಂತ್ರಸ್ತೆಗೆ ಗರಿಷ್ಠ ಬೆಂಬಲವನ್ನು ನೀಡಲು ಯತ್ನಿಸುತ್ತಿದ್ದೇವೆ. ಅದಕ್ಕೂ ನಿಮಗೂ ಹಾಗೂ ಸಂತ್ರಸ್ತರಿಗೂ ಯಾವುದೇ ಸಂಬಂಧವಿಲ್ಲ" ಎಂದು ಅರ್ಜಿದಾರರನ್ನು ಉದ್ದೇಶಿಸಿ ನ್ಯಾಯಮೂರ್ತಿ ರಾಮಚಂದ್ರನ್ ಹೇಳಿದರು.

ಆದರೆ, ಪುರುಷರೂ ಲೈಂಗಿಕ ದೌರ್ಜನ್ಯಕ್ಕೀಡಾಗಬಹುದು, ಪೋಕ್ಸೊ ಪ್ರಕರಣಗಳ ಸಂತ್ರಸ್ತರಲ್ಲಿ ಬಾಲಕರ ಸಂಖ್ಯೆಯೂ ಹೆಚ್ಚಳವಾಗಿದೆ. ಇತ್ತೀಚಿನ ದಿನಗಳಲ್ಲಿ ನಾನೇ ಅಂತಹ ಕೆಲವು ಪ್ರಕರಣಗಳನ್ನು ನೋಡಿದ್ದೇನೆ ಎಂದು ನ್ಯಾಯಮೂರ್ತಿಗಳು ನುಡಿದರು.

"ನೀವು (ಅರ್ಜಿದಾರರು-ವೈದ್ಯರು) ಇದನ್ನು ಸಾಮಾಜಿಕ ಬದ್ಧತೆಯಾಗಿ ತೆಗೆದುಕೊಳ್ಳಬೇಕು. ರಾತ್ರಿ ಕರೆದರೂ ನೀವು ಹೋಗಬೇಕು. ನಿಮಗೆ ಹಣ ಸಿಗುವುದಾದರೆ ನೀವು ಓಡುತ್ತೀರಿ. ಈ ಪ್ರೋಟೋಕಾಲ್ ತಪ್ಪು ಎಂದು ನಾನು ಭಾವಿಸುವುದಿಲ್ಲ ಆದರೆ ಅದರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ನಾವು ಖಂಡಿತವಾಗಿಯೂ ಪರಿಹರಿಸಬಹುದು" ಎಂದು ನ್ಯಾಯಮೂರ್ತಿಗಳು ಹೇಳಿದರು.

ಮಾರ್ಚ್ 5ಕ್ಕೆ ಪ್ರಕರಣವನ್ನು ಮತ್ತೆ ಆಲಿಸುವುದಾಗಿ ನ್ಯಾಯಾಲಯ ಅಂತಿಮವಾಗಿ ತಿಳಿಸಿತು.