ದೇವಾಲಯಗಳ ಆಡಳಿತ ಮಂಡಳಿಗಳ ಸೋಗಿನಲ್ಲಿ ಆನ್‌ಲೈನ್ ದೇಣಿಗೆ ಮತ್ತು ಪೂಜಾ ಬುಕಿಂಗ್‌ಗೆ ಮೋಸದಿಂದ ಹಣ ಸಂಗ್ರಹಿಸುವ ನಕಲಿ ಜಾಲತಾಣಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ಕೊಚ್ಚಿ ದೇವಸ್ವಂ ಮಂಡಳಿಯ ಮುಖ್ಯ ಜಾಗೃತ ಅಧಿಕಾರಿಗೆ ನಿರ್ದೇಶನ ನೀಡಿದೆ [ದೇವಿದಾಸರು ಮತ್ತಿತರರು ಹಾಗೂ ಕೊಚ್ಚಿ ದೇವಸ್ವಂ ಮಂಡಳಿ ಇನ್ನಿತರರ ನಡುವಣ ಪ್ರಕರಣ].
ನಕಲಿ ಜಾಲತಾಣಗಳು, ಸಾಮಾಜಿಕ ಮಾಧ್ಯಮ ನಕಲಿ ಖಾತೆಗಳ ವಂಚನೆಯ ಬಗ್ಗೆ ಭಕ್ತರು ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ವಿ ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವೈಯಕ್ತಿಕ ಲಾಭಕ್ಕಾಗಿ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ಸೈಬರ್ ವಂಚನೆಗಳಿಂದ ಭಕ್ತರನ್ನು ರಕ್ಷಿಸುವುದು ಅತ್ಯಗತ್ಯ ಎಂದಿರುವ ಅದು ಕೊಚ್ಚಿ ದೇವಸ್ವಂ ಮಂಡಳಿ ತನ್ನ ಆಡಳಿತದಲ್ಲಿರುವ ಎಲ್ಲಾ ಪ್ರಮುಖ ದೇವಾಲಯಗಳಿಗೆ ಅಧಿಕೃತ ಆನ್‌ಲೈನ್ ಪೂಜಾ ಬುಕಿಂಗ್ ಮತ್ತು ದೇಣಿಗೆ ವ್ಯವಸ್ಥೆ ಜಾರಿಗೆ ತರಬೇಕು ಎಂಬುದಾಗಿ ನಿರ್ದೇಶನ ನೀಡಿತು.
ಭಕ್ತರನ್ನು ಶೋಷಿಸಲು ದೇವಾಲಯಗಳನ್ನು ಪ್ರತಿನಿಧಿಸುವುದಾಗಿ ಮೋಸದಿಂದ ಹೇಳಿಕೊಳ್ಳುವ ಯಾವುದೇ ಆನ್‌ಲೈನ್ ವೇದಿಕೆಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮಂಡಳಿಗೆ ಆದೇಶಿಸಿ ಅರ್ಜಿ ವಿಲೇವಾರಿ ಮಾಡಿತು.
ತ್ರಿಪುಣಿತುರದಲ್ಲಿರುವ ಶ್ರೀ ಪೂರ್ಣತ್ರಯೀಶ ದೇವಸ್ಥಾನದ ಹಲವಾರು ಭಕ್ತರು ದೇವಾಲಯದ ಲೆಕ್ಕಪತ್ರಗಳ ಬಿಗಿಯಾದ ಹಣಕಾಸು ಲೆಕ್ಕಪರಿಶೋಧನೆ, ಸ್ವಯಂಸೇವಕರ ಮೇಲೆ ಉತ್ತಮ ನಿಯಂತ್ರಣ ಮತ್ತು ದೇವಾಲಯಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಹೆಚ್ಚಿನ ಪಾರದರ್ಶಕತೆ ಸೇರಿದಂತೆ ವಿವಿಧ ಪರಿಹಾರಗಳನ್ನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ದೇವಾಲಯದ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ನಕಲಿ ಆನ್‌ಲೈನ್ ಖಾತೆಗಳು ಮತ್ತು ಜಾಲತಾಣಗಳ ಸಮಸ್ಯೆಯನ್ನು ಕೂಡ ಈ ವೇಳೆ ಅರ್ಜಿದಾರರು ಪ್ರಸ್ತಾಪಿಸಿದ್ದರು.