ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೊಬೈಲ್ ಫೋನ್‌ಗಳನ್ನು ಹೈಕೋರ್ಟ್ ರಿಜಿಸ್ಟ್ರಿಗೆ ಒಪ್ಪಿಸುವಂತೆ ಮಲಯಾಳಂ ನಟ ದಿಲೀಪ್‌ಗೆ ಕೇರಳ ಹೈಕೋರ್ಟ್ ಆದೇಶಿಸಿದೆ [ಪಿ ಗೋಪಾಲಕೃಷ್ಣನ್ ಅಲಿಯಾಸ್ ದಿಲೀಪ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆರೋಪಿ ತನ್ನ ಬಳಿ ಇರುವ ಏಳು ಮೊಬೈಲ್ ಫೋನ್‌ಗಳನ್ನು ಒಪ್ಪಿಸುವಂತೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿ ಆಲಿಸಿದ ನ್ಯಾ. ಗೋಪಿನಾಥ್ ಪಿ ಅವರಿದ್ದ ಏಕಸದಸ್ಯ ಪೀಠ “ವಿಧಿ ವಿಜ್ಞಾನ ಪರೀಕ್ಷೆಗಾಗಿ ಮೊಬೈಲ್ ಫೋನ್ ಒಪ್ಪಿಸುವಂತೆ ಕೋರಲು ಪ್ರಾಸಿಕ್ಯೂಷನ್‌ಗೆ ಎಲ್ಲಾ ಹಕ್ಕೂ ಇದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯ 79 ಎ ನಿಯಮದಡಿ ಗುರುತಿಸಲಾದ ಸಂಸ್ಥೆಯೊಂದು ಪೋನ್‌ಗಳನ್ನು ಪರಿಶೀಲಿಸಬೇಕು” ಎಂದಿದೆ.
ಸಾಕಷ್ಟು ಮಾಹಿತಿ ಇರದ ಒಂದು ಫೋನ್ ಹೊರತುಪಡಿಸಿ ಉಳಿದ ಏಳು ಫೋನ್‌ಗಳಲ್ಲಿ ಆರನ್ನು ಜನವರಿ 31 ರ ಸೋಮವಾರ ಬೆಳಿಗ್ಗೆ 10.15 ರೊಳಗೆ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ ರಿಜಿಸ್ಟ್ರಿಗೆ ಒಪ್ಪಿಸುವಂತೆ ನ್ಯಾಯಾಲಯ ಸೂಚಿಸಿದೆ.
ಕೆ ಎಸ್ ಪುಟ್ಟಸ್ವಾಮಿ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹಾಗೂ ವೀರೇಂದ್ರ ಖನ್ನಾ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಮೊಬೈಲ್ ಫೋನ್‌ಗಳನ್ನು ಪ್ರಾಸಿಕ್ಯೂಷನ್‌ಗೆ ನೀಡುವುದು ಸ್ವಯಂ ದೋಷಾರೋಪಣೆಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.