ಪತಿಯೊಬ್ಬ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಮಾಲೀಕನೊಂದಿಗೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿರಬಹುದು ಎನ್ನುವ ಶಂಕೆಯಿಂದ ಮಾಲೀಕನನ್ನು ಕೊಂದ ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯವು ಪತ್ನಿಯ ಸಾಕ್ಷ್ಯವನ್ನು ಸಾಕ್ಷ್ಯ ಕಾಯಿದೆಯ ಸೆಕ್ಷನ್ 122ರ ಅನ್ವಯ ಪರಿಗಣಿಸದೆ ಇದ್ದ ಬಗ್ಗೆ ಕೇರಳ ಹೈಕೋರ್ಟ್ ತನ್ನ ಅಸಂತೋಷ ವ್ಯಕ್ತಪಡಿಸಿದೆ.
ಸಾಕ್ಷ್ಯ ಕಾಯಿದೆ ಸೆಕ್ಷನ್ 122 ವೈವಾಹಿಕ ಸಂಬಂಧದಲ್ಲಿನ ಪತಿ-ಪತ್ನಿಯರ ನಡುವಿನ ನಂಬಿಕೆಯನ್ನು ಆಧರಿಸಿದ್ದು ದಂಪತಿಯ ನಡುವಿನ ಮಾತುಕತೆಗಳ ಪಾವಿತ್ರ್ಯವನ್ನು ಕಾಪಾಡುವ ಬಗ್ಗೆ ಒತ್ತಿ ಹೇಳುತ್ತದೆ. ಮದುವೆಯಾಗಿರುವ ಯಾವುದೇ ವ್ಯಕ್ತಿಯು ವೈವಾಹಿಕ ಸಂಬಂಧದಲ್ಲಿರುವಾಗ ತನ್ನನ್ನು ವಿವಾಹವಾಗಿರುವ ವ್ಯಕ್ತಿಯು ಹೇಳಿರುವ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಒತ್ತಾಯಿಸಲಾಗದು; ಅಥವಾ ಬಹಿರಂಗಗೊಳಿಸಲು ಅನುಮತಿಸಲಾಗದು ಎಂದು ಈ ನಿಯಮ ಹೇಳುತ್ತದೆ. ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಬಿಡುಗಡೆ ಮಾಡುವಾಗ ಈ ಸೆಕ್ಷನ್ ಅನ್ನು ವಿಶೇಷವಾಗಿ ಪರಿಗಣಿಸಿ, ಪ್ರತ್ಯಕ್ಷದರ್ಶಿಗಳ ಸಾಕ್ಷ್ಯವನ್ನು ಅನುಮಾನಿಸಿತ್ತು.
ಈ ಆಕ್ಷೇಪಾರ್ಹ ಸಕ್ಷೆನ್‌ನ ಸಿಂಧುತ್ವವನ್ನು ಒರೆಗಲ್ಲಿಗೆ ಹಚ್ಚುವಾಗ ಭೀಭತ್ಸ ಕ್ರೌರ್ಯದ ಸಾರ್ವಜನಿಕ ಅಪರಾಧದ ಪ್ರಕರಣಗಳನ್ನು ಒಂದೆಡೆ ಹಾಗೂ ನಂಬಿಕೆಯ ನೆಲೆಗಟ್ಟಿನ ಮೇಲೆ ನಿಂತಿರುವ ಕುಟುಂಬಗಳ ಶಾಂತಿಯನ್ನು ಮತ್ತೊಂದೆಡೆ ಪರಿಗಣಿಸಬೇಕಾಗುತ್ತದೆ ಎಂದು ನ್ಯಾ. ಕೆ ವಿನೋದ್ ಚಂದ್ರನ್ ಹಾಗೂ ನ್ಯಾ. ಸಿ ಜಯಚಂದ್ರನ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
ಮುಂದುವರೆದು, "ನಾವು ಅಂತಿಮವಾಗಿ ಸತ್ಯದ ಮಹತ್ವ ಹಾಗೂ ಔನ್ನತ್ಯವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಈಗಿರುವ ರೀತಿಯಲ್ಲಿ ಈ ನಿಯಮದ (ಸೆಕ್ಷನ್ 122) ವಿರುದ್ಧ ನಮ್ಮ ಮತ ಹಾಕಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ಸೆಕ್ಷನ್ 122ಅನ್ನು ಹೆಚ್ಚಿನ ಪರಾಮರ್ಶೆಗೆ ಒಡ್ಡಲು ಇದು ಸಕಾಲ. ಅದರಲ್ಲಿಯೂ ಮನುಷ್ಯ ಸಂಬಂಧಗಳು ಹಾಗೂ ಕೌಟುಂಬಿಕ ಸಂಬಂಧಗಳ ಬದಲಾಗುತ್ತಿರುವ ಮೌಲ್ಯಗಳ ಹಿನ್ನೆಲೆಯಲ್ಲಿ ಇದನ್ನು ವಿಶೇಷವಾಗಿ ಪರಿಗಣಿಸಬೇಕಿದೆ" ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
ಅಂತಿಮವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿದ ಪೀಠವು ಆರೋಪಿಯನ್ನು ಐಪಿಸಿ ಸೆಕ್ಷನ್ 302ರ (ಕೊಲೆ) ಅಡಿ ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿ, ರೂ. 2 ಲಕ್ಷ ದಂಡ ಹಾಕಿತು. ದಂಡದ ಹಣವನ್ನು ಹತ್ಯೆಗೊಳಗಾದ ವ್ಯಕ್ತಿಯ ಕುಟುಂಬಕ್ಕೆ ನೀಡಲು ಆದೇಶಿಸಿತು.