ಕೋವಿಡ್ ಸಮಯದಲ್ಲಿ ವೈಯಕ್ತಿಕ ರಕ್ಷಣಾ ಸಾಧನದ (ಪಿಪಿಇ ಕಿಟ್) ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ದೂರಿನ ಮೇರೆಗೆ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ ಶೈಲಜಾ ಅವರ ವಿರುದ್ಧ ಲೋಕಾಯುಕ್ತ ಆರಂಭಿಸಿದ್ದ ತನಿಖೆ ರದ್ದುಗೊಳಿಸಲು ಕೇರಳ ಹೈಕೋರ್ಟ್ ಗುರುವಾರ ನಿರಾಕರಿಸಿದೆ [ರಾಜನ್ ಎನ್ ಖೋಬ್ರಾಗಡೆ ಐಎಎಸ್ ಮತ್ತು ವೀಣಾ ಎಸ್. ನಾಯರ್ ನಡುವಣ ಪ್ರಕರಣ].
ಪ್ರಕರಣದ ತನಿಖೆ ನಡೆಸುವ ಲೋಕಾಯುಕ್ತದ ಅಧಿಕಾರ ವ್ಯಾಪ್ತಿ ಪ್ರಶ್ನಿಸಿದ್ದ ಮನವಿಯನ್ನುಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿತು.
ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತಿರುವನಂತಪುರದ ಕಾಂಗ್ರೆಸ್ ನಾಯಕಿ ಹಾಗೂ ವಕೀಲೆ ವೀಣಾ ಎಸ್ ನಾಯರ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕೇರಳ ವೈದ್ಯಕೀಯ ಸೇವಾ ನಿಗಮ ಲಿಮಿಟೆಡ್ (ಕೆಎಂಎಸ್‌ಸಿಎಲ್), ಕೆ ಕೆ ಶೈಲಜಾ ಸೇರಿದಂತೆ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿರುವ ಲೋಕಾಯುಕ್ತ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಪ್ರಸ್ತುತ ಪ್ರಕರಣದ ಅರ್ಜಿದಾರರಲ್ಲಿ ಶೈಲಜಾ, ಕೆಎಂಎಸ್‌ಸಿಎಲ್ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಸೇರಿದ್ದಾರೆ. ವಿಪತ್ತು ನಿರ್ವಹಣಾ ಕಾಯಿದೆ 2005 ರ ಅಡಿಯಲ್ಲಿ ಬರುವ ದೂರನ್ನು ಎದುರಿಸಲು ಲೋಕಾಯುಕ್ತಕ್ಕೆ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದರು.
ಲೋಕಾಯುಕ್ತ ಕಾಯಿದೆ, 1999 ಮತ್ತು ವಿಪತ್ತು ನಿರ್ವಹಣಾ ಕಾಯಿದೆ 2005 ರ ನಿಬಂಧನೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನ್ಯಾಯಾಲಯ, ಈ ದೂರನ್ನು ಮುಂದುವರಿಸಲು ಲೋಕಾಯುಕ್ತ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು.