Kerala High court with Avani Bansal and Rajeev Chandrasekhar  facebook, twitter
ಸುದ್ದಿಗಳು

ಚುನಾವಣಾ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ: ರಾಜೀವ್ ಚಂದ್ರಶೇಖರ್ ವಿರುದ್ಧದ ಪಿಐಎಲ್‌ ತಿರಸ್ಕರಿಸಿದ ಕೇರಳ ಹೈಕೋರ್ಟ್‌

Bar & Bench

ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ನಾಮಪತ್ರದೊಂದಿಗೆ ಸುಳ್ಳು ಅಫಿಡವಿಟ್‌  ಸಲ್ಲಿಸಿದ್ದಾರೆ ಎಂದು ಆರೋಪಿಸಿ ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಕೇರಳ ಹೈಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ [ಅವನಿ ಬನ್ಸಾಲ್ ಮತ್ತು ಭಾರತ ಚುನಾವಣಾ ಆಯೋಗ ಇನ್ನಿತರರ ನಡುವಣ ಪ್ರಕರಣ].

ಒಮ್ಮೆ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾಧಿಕಾರಿ ಅಂಗೀಕರಿಸಿದ ಮೇಲೆ ದೂರುದಾರರು ಪರಿಹಾರಕ್ಕಾಗಿ ಹೈಕೋರ್ಟ್‌ಗೆ ಚುನಾವಣಾ ಅರ್ಜಿ ಸಲ್ಲಿಸಬಹುದೇ ವಿನಾ ಪಿಐಎಲ್‌ ಸಲ್ಲಿಸಲಾಗದು ಎಂದು ನ್ಯಾಯಮೂರ್ತಿಗಳಾದ ವಿ ಜಿ ಅರುಣ್ ಮತ್ತು ಎಸ್ ಮನು ಅವರನ್ನೊಳಗೊಂಡ ಪೀಠ ತಿಳಿಸಿತು.

 ಭಾರತೀಯ ಚುನಾವಣಾ ಆಯೋಗದ ಪರ ವಕೀಲರು ಮಂಡಿಸಿದ ಸಮಂಜಸ ವಾದದಂತೆ ಒಬ್ಬರು ಸಲ್ಲಿಸಿದ ಅಫಿಡವಿಟ್‌ ಅಂಗೀಕರಿಸಿರುವ ಬಗ್ಗೆ ಅರ್ಜಿದಾರ ಅಸಮಾಧಾನಗೊಂಡರೆ ಆತ ಅದನ್ನು ಚುನಾವಣಾ ಅರ್ಜಿ ಮೂಲಕ ಪ್ರಶ್ನಿಸುವುದು ಪರಿಹಾರವಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

 ಅಫಿಡವಿಟ್‌ನ ಲೋಪದೋಷಗಳ ಬಗೆಗಿನ ದೂರಿನ ಕುರಿತು ಚುನಾವಣಾಧಿಕಾರಿ ತಾನು ಕೈಗೊಂಡ ನಿರ್ಧಾರದ ಬಗ್ಗೆ ವಿವರಣೆ ನೀಡುವುದು ಕಡ್ಡಾಯ ಎನ್ನುವ ಯಾವುದೇ ಕಾನೂನು ಇಲ್ಲ ಎಂದು ಕೂಡ ಅದು ತಿಳಿಸಿದೆ.

 ಚಂದ್ರಶೇಖರ್‌ ಅವರು ಸಲ್ಲಿಸಿದ್ದ ಚುನಾವಣಾ ಅಫಡಿವಿಟ್‌ನ ಲೋಪದೋಷಗಳನ್ನು ಬಹಿರಂಗಪಡಿಸಿ ತಾವು ಚುನಾವಣಾಧಿಕಾರಿಗೆ ದೂರು ನೀಡಿದ್ದರೂ ಆ ದೂರಿನ ಬಗ್ಗೆ ಚುನಾವಣಾಧಿಕಾರಿ ಯಾವುದೇ ತರ್ಕಬದ್ಧ ಆದೇಶ ನೀಡಿರಲಿಲ್ಲ ಎಂಬುದು ಅರ್ಜಿದಾರರಾದ ವಕೀಲೆ ಹಾಗೂ ಕಾಂಗ್ರೆಸ್‌ನ ನಾಯಕಿ ಅವನಿ ಬನ್ಸಾಲ್‌ ಮತ್ತು ರೆಂಜಿತ್‌ ಥಾಮಸ್‌ ಅವರ ವಾದಗಳಲ್ಲಿ ಒಂದಾಗಿತ್ತು.  

ದೂರಿನ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಯುವ ಅರ್ಹತೆ ಇಲ್ಲವೇ ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಜಾರ್ಜ್ ಪೂಂತೋಟ್ಟಮ್ ಪ್ರಶ್ನಿಸಿದಾಗ "ಆ ಹಂತ ಮುಗಿದಿದೆ. ಚುನಾವಣಾಧಿಕಾರಿ ನಿಮಗೆ ತಾರ್ಕಿಕ ಆದೇಶವನ್ನು ನೀಡದಿರುವುದು ಸರಿಯೇ ಅಥವಾ ಇಲ್ಲವೇ ಎಂಬುದನ್ನು ನಾವು ಈಗ ನಿರ್ಧರಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಪ್ರತಿಕ್ರಿಯಿಸಿತು. ಹೀಗಾಗಿ ಅದು ಅರ್ಜಿ ತಿರಸ್ಕರಿಸಿತು.

ಚಂದ್ರಶೇಖರ್ ಅವರು ತಮ್ಮ ಆಸ್ತಿ, ಐಷಾರಾಮಿ ಕಾರು ಹಾಗೂ ಖಾಸಗಿ ಜೆಟ್‌ ಹೊಂದಿರುವ ವಿಚಾರವನ್ನು ಉದ್ದೇಶಪೂರ್ವಕವಾಗಿ ತಿಳಿಸಿಲ್ಲ. ವಿವಿಧ ಕಂಪನಿಗಳಲ್ಲಿನ ಅವರ ಷೇರುಗಳನ್ನು ಕಡಿಮೆ ಮೌಲ್ಯೀಕರಣ ಮಾಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.

ಸಾರ್ವಜನಿಕ ವ್ಯಕ್ತಿತ್ವ ಹೊಂದಿರುವ ಚಂದ್ರಶೇಖರ್‌ ವಿರುದ್ಧ ತಿರುವನಂತಪುರದ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದರೂ ಅವರು ಈ ಕುರಿತು ಯಾವುದೇ ಆದೇಶ ಇಲ್ಲವೇ ವರದಿ ನೀಡಿಲ್ಲ. ಚಂದ್ರಶೇಖರ್‌ ಸಲ್ಲಿಸಿದ ನಾಮಪತ್ರ ಪ್ರಜಾಪ್ರತಿನಿಧಿ ಕಾಯಿದೆ- 1950 ಮತ್ತು ಚುನಾವಣಾ ನಿಯಮ ನಡಾವಳಿ  1961ರ ನಿಯಮಾವಳಿಗಳ ಸಂಪೂರ್ಣ ಮತ್ತು ಪುನರಾವರ್ತಿತ ಉಲ್ಲಂಘನೆಯಾಗಿದೆ ಎಂದು ಅರ್ಜಿ ತಿಳಿಸಿತ್ತು.

ಸುಳ್ಳು ಅಫಿಡವಿಟ್ ಸಲ್ಲಿಸುವುದು ಜನ ಪ್ರತಿನಿಧಿ ಕಾಯಿದೆಯ 125 ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು , 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಇಲ್ಲವೇಎರಡನ್ನೂ ವಿಧಿಸಬಹುದು ಎಂದು ಅದು ಹೇಳಿತ್ತು.

ತಮ್ಮ ದೂರಿಗೆ ಚುನಾವಣಾಧಿಕಾರಿ ತರ್ಕಬದ್ಧ ಆದೇಶ ನೀಡದಿರುವುದು ದೂರಿನಲ್ಲಿರುವ ಆರೋಪಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ನಿರಾಕರಿಸಲಾಗಿದೆಯೇ ಎಂದು ತಿಳಿದುಕೊಳ್ಳುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಲಾಗಿತ್ತು.