ʼಪ್ರಚೋದನಾಕಾರಿ ಉಡುಪು ಆದೇಶʼ ಮಾಡಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್ ಕೃಷ್ಣ ಕುಮಾರ್ ಅವರು ತಮ್ಮನ್ನು ಕಾರ್ಮಿಕ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಕೇರಳ ಹೈಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.
ಅರ್ಜಿಯು ಮಂಗಳವಾರ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಅರ್ಜಿದಾರ ನ್ಯಾಯಾಧೀಶರನ್ನು ಕುರಿತು "ನಿಮ್ಮ ವರ್ಗಾವಣೆಯು ಆಕ್ಷೇಪಾರ್ಹ ಆದೇಶದ ಹಿನ್ನೆಲೆಯಲ್ಲಿ ನಡೆದಿದೆ ಎಂಬುದನ್ನು ಸಾಬೀತುಪಡಿಸಲು ಏನು ದಾಖಲೆ ಇದೆ?" ಎಂದು ಪ್ರಶ್ನಿಸಿದರು.
ಮುಂದುವರೆದು, "(ವಿವಾದಾತ್ಮಕ ಪ್ರಚೋದನಾಕಾರಿ ಉಡುಪು) ಆ ಆದೇಶ ಹಿನ್ನೆಲೆಯಲ್ಲೇ ವರ್ಗಾವಣೆಯಾಗಿದೆ ಎಂದು ತಿಳಿಸಲು ಯಾವ ದಾಖಲೆ ಇದೆ? ಇದು ಸಾಮಾನ್ಯ ವರ್ಗಾವಣೆ (ಸಿಂಪ್ಲಿಸಿಟರ್)” ಎಂದು ನ್ಯಾ. ಅನು ಹೇಳಿದರು. ಅಲ್ಲದೇ, ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರ ಶ್ರೇಣಿಗೆ ಒಳಪಟ್ಟಿರುತ್ತಾರೆ ಎಂದೂ ಹೇಳಿದರು.
ಸಂತ್ರಸೆಯು ಲೈಂಗಿಕವಾಗಿ ಪ್ರಚೋದನೆ ನೀಡುವಂಥ ಉಡುಪು ಧರಿಸಿದ್ದರೆ ಲೈಂಗಿಕ ಕಿರುಕುಳ ಪ್ರಕರಣ ಮೇಲ್ನೋಟಕ್ಕೆ ನಿಲ್ಲುವುದಿಲ್ಲ ಎಂಬ ವಿವಾದಾತ್ಮಕ ತೀರ್ಪು ಪ್ರಕಟಿಸಿದ್ದ ಕೊರಿಕ್ಕೋಡ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಎಸ್ ಕೃಷ್ಣಕುಮಾರ್ ಅವರನ್ನು ಕೊಲ್ಲಂನ ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ ಎಂದು ಕೇರಳ ಹೈಕೋರ್ಟ್‌ನ ವೆಬ್‌ಸೈಟ್‌ನಲ್ಲಿ ನೋಟಿಸ್ ಪ್ರಕಟಿಸಲಾಗಿತ್ತು. ನಿಯಮಿತ ವರ್ಗಾವಣೆಯ ಭಾಗವಾಗಿ ಅವರನ್ನು ವರ್ಗ ಮಾಡಲಾಗಿದ್ದು, ನ್ಯಾ. ಕೃಷ್ಣಕುಮಾರ್ ಅವರಂತೆಯೇ ಇತರೆ ಮೂವರು ನ್ಯಾಯಾಧೀಶರನ್ನೂ ವರ್ಗಾವಣೆ ಮಾಡಲಾಗಿತ್ತು.
ಭಾರತೀಯ ದಂಡ ಸಂಹಿತೆ ಸೆಕ್ಷನ್ 354ಎ ಅಡಿ ಅಪರಾಧವಾಗಬೇಕಾದರೆ ಅಸಮ್ಮತಿ ಲೈಂಗಿಕ ಬೇಡಿಕೆ ಇರಬೇಕು. ಕೀಳು ಅಭಿರುಚಿಯ ಲೈಂಗಿಕ ಹೇಳಿಕೆಗಳು ಇರಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಲಭ್ಯವಿರುವ ದೂರುದಾರೆಯ ಚಿತ್ರಗಳಲ್ಲಿ ಆಕೆ ಪ್ರಚೋದನಾಕಾರಿ ಉಡುಪು ಧರಿಸಿಕೊಂಡಿದ್ದಾರೆ ಎಂದಿದ್ದ ನ್ಯಾ. ಎಸ್ ಕೃಷ್ಣ ಕುಮಾರ್ ಅವರು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಸಿವಿಕ್ ಚಂದ್ರನ್ ಅವರಿಗೆ ಜಾಮೀನು ಮಂಜೂರು ಮಾಡಿದ್ದರು. ಈ ಆದೇಶದಕ್ಕೆ ಆಗಸ್ಟ್ 24ರಂದು ಕೇರಳ ಹೈಕೋರ್ಟ್ ತಡೆ ನೀಡಿದೆ.