Kerala High Court 
ಸುದ್ದಿಗಳು

ದೇಗುಲ ಆವರಣದಲ್ಲಿ ಆರ್‌ಎಸ್‌ಎಸ್‌ ಶಸ್ತ್ರಾಸ್ತ್ರ ತರಬೇತಿ: ಸರ್ಕಾರ, ಸಂಘದ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್

ಈ ಸಂಬಂಧ ರಾಜ್ಯ ಸರ್ಕಾರ, ತಿರುವಾಂಕೂರು ದೇವಸ್ವಂ ಮಂಡಳಿ ಹಾಗೂ ಆರ್‌ಎಸ್‌ಎಸ್‌ ಸದಸ್ಯರಿಗೆ ನೋಟಿಸ್ ನೀಡಿರುವ ಪೀಠ ಪ್ರಕರಣನ್ನು ಜೂನ್ 26, ಸೋಮವಾರಕ್ಕೆ ಮುಂದೂಡಿದೆ.

Bar & Bench

ಕೇರಳದ ಚಿರಯಿನ್‌ಕೀಳುವಿನಲ್ಲಿರುವ ಶ್ರೀ ಶಾರ್ಕರ ದೇವಿ ದೇವಸ್ಥಾನದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸದಸ್ಯರು ಅಕ್ರಮವಾಗಿ ಸಾಮೂಹಿಕ ಕವಾಯತು ಮತ್ತು ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿದ್ದಾರೆ ಎಂದು ಆರೋಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರ ಹಾಗೂ ಆರ್‌ಎಸ್‌ಎಸ್‌ನ ಇಬ್ಬರು ಸದಸ್ಯರ ಪ್ರತಿಕ್ರಿಯೆ ಕೇಳಿದೆ [ಜಿ ವ್ಯಾಸನ್‌ ಮತ್ತಿತರರು ಹಾಗೂ  ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ ರಾಜ್ಯ ಸರ್ಕಾರ, ತಿರುವಾಂಕೂರು ದೇವಸ್ವಂ ಮಂಡಳಿ ಹಾಗೂ ಆರ್‌ಎಸ್‌ಎಸ್‌ ಸದಸ್ಯರಿಗೆ ನೋಟಿಸ್‌ ನೀಡಿರುವ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರನ್ನೊಳಗೊಂಡ ಪೀಠ ಪ್ರಕರಣನ್ನು ಜೂನ್ 26, ಸೋಮವಾರಕ್ಕೆ ಮುಂದೂಡಿದೆ.

ಆರ್‌ಎಸ್‌ಎಸ್‌ ಸದಸ್ಯರ ಕಾರ್ಯಚಟುವಟಿಕೆಯಿಂದಾಗಿ ಯಾತ್ರಾರ್ಥಿಗಳು ಮತ್ತು ಭಕ್ತರು ಅದರಲ್ಲಿಯೂ ಮಕ್ಕಳು ಮತ್ತು ಮಹಿಳೆಯರಿಗೆ ತೊಂದರೆ ಉಂಟಾಗುತ್ತಿದೆ ಎಂದು  ಇಬ್ಬರು ಭಕ್ತರು ಮತ್ತು ದೇವಸ್ಥಾನದ ವ್ಯಾಪ್ತಿಯಲ್ಲಿ ನೆಲೆಸಿರುವ ನಿವಾಸಿಗಳು ಕೆಲ ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದರು.

ದೇಗುಲದ ಆವರಣವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಕೂಡದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸುತ್ತೋಲೆ ಹೊರಡಿಸಿದ್ದರೂ ಆರ್‌ಎಸ್‌ಎಸ್‌ ಸದಸ್ಯರು ಸಂಜೆ 5ರಿಂದ ರಾತ್ರಿ 12ರವರೆಗೆ ಕವಾಯತು ಮತ್ತು ತರಬೇತಿ ನಡೆಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಪ್ರತಿವಾದಿಗಳು (ಇಬ್ಬರು ಆರ್‌ಎಸ್‌ಎಸ್‌ ಸದಸ್ಯರು) ತಮ್ಮ ಸಹಚರರೊಂದಿಗೆ ಸಾಮೂಹಿಕ ಕವಾಯತು ಮತ್ತು ಶಸ್ತ್ರಾಸ್ತ್ರ ತರಬೇತಿಯ ಭಾಗವಾಗಿ ಜೋರಾಗಿ ಘೋಷಣೆ ಕೂಗುತ್ತಾರೆ. ಹೀಗಾಗಿ ಭಕ್ತರು ಮಾನಸಿಕ ಒತ್ತಡ ತೊಂದರೆ ಅನುಭವಿಸುವಂತಾಗಿದ್ದು ದೇಗುಲಕ್ಕೆ ಭೇಟಿ ನೀಡುವುದು ತುಂಬಾ ಕಷ್ಟವಾಗುತ್ತಿದೆ. ದೇಗುಲದಲ್ಲಿ ಧ್ಯಾನ ಮತ್ತು ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಶಾಂತ ವಾತಾವರಣ ಇಲ್ಲದಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.